
ಪ್ರಗತಿವಾಹಿನಿ ಸುದ್ದಿ: ಸದನದಲ್ಲಿ ಏನು ನಡೆಯಬೇಕು, ಏನು ಮಾತನಾಡಬೇಕು ಎಂದು ನಿರ್ಧಿಸುವುದು ಸ್ಪೀಕರ್ ಕೆಲಸ. ಸಭೆಯ ಘನತೆ, ಗೌರವ, ಮರ್ಯಾದೆ ಕಾಪಾಡುವುದು ಸಭಾಧ್ಯಕ್ಷರ ಕರ್ತವ್ಯ. ಅದನ್ನು ಅವರು ಸರಿಯಾಗಿ ನಿಭಾಯಿಸಿದ್ದಾರೆ. ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವ ಕ್ರಮ ಸರಿಯಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಸುದ್ದಿಗಾರರೂಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಶಾಸಕರು ಸದನದಲ್ಲಿ ಗೌರವಯುತವಾಗಿ ನಡೆದುಕೊಳ್ಳಬೇಕು . ಸದನದ ಗೌರವ ಕಾಪಾಡುವುದು ಶಾಸಕರ ಕರ್ತವ್ಯ ಕೂಡ ಆಗಿದೆ. ಸದನದಲ್ಲಿ ಅಸಭ್ಯತೆಯಿಂದ ಶಾಸಕರು ನಡೆದುಕೊಂಡಾಗ ಅನಿವಾರ್ಯವಾಗಿ ಸಭಾಧ್ಯಕ್ಷರು ಅವರನ್ನು ಅಮಾನತು ಮಾಡಿ ಕ್ರಮ ಕೈಗೊಂಡಿದ್ದಾರೆ. ಶಾಸಕರನ್ನು ಅಮಾನತು ಮಾಡುವ ಅಧಿಕಾರ ಸಭಾಧ್ಯಕ್ಷರಿಗೆ ಇದೆ ಎಂದರು.
ಇದೇ ವೇಳೆ ಹನಿಟ್ರ್ಯಾಪ್ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಗೃಹ ಸಚಿವರು, ಸಚಿವ ಕೆ.ಎನ್.ರಾಜಣ್ಣ ನನ್ನನ್ನು ಭೇಟಿಯಾಗಿ ಎಲ್ಲಾ ವಿಚಾರ ಹೇಳಿದ್ದಾರೆ. ಅವರು ಪೊಲೀಸರಿಗೆ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.