
ಪ್ರಗತಿವಾಹಿನಿ ಸುದ್ದಿ: ಅಮೆರಿಕಾದ ಟೆಕ್ಸಾಸ್ ರಾಜ್ಯದಲ್ಲಿ ನಡೆದ ದುರಂತದಲ್ಲಿ ಐವರು ಪಿಕಲ್‌ಬಾಲ್ ಕ್ರೀಡಾಪಟುಗಳು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಮೆರಿಕಾದಿಂದ ನ್ಯೂ ಬ್ರಾನ್‌ಫೆಲ್ಸ್ಗೆ ಪ್ರಯಾಣಿಸುತ್ತಿದ್ದ ಸೆಸ್ನಾ 421 ಸಿ’ (Cessna 421C) ಹೆಸರಿನ ಸಣ್ಣ ವಿಮಾನವು ಗುರುವಾರ ತಡರಾತ್ರಿ ವಿಂಬರ್ಲಿ ಭಾಗದ ಜನವಸತಿ ಪ್ರದೇಶಕ್ಕೆ ಹತ್ತಿರವಿರುವ ದಟ್ಟ ಅರಣ್ಯ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ.
ವಿಮಾನದಲ್ಲಿದ್ದ ಪೈಲಟ್ ಸೇರಿದಂತೆ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರೆಲ್ಲರೂ ‘ಅಮರಿಲ್ಲೋ ಪಿಕಲ್‌ಬಾಲ್ ಕ್ಲಬ್‌ನ ಸಕ್ರಿಯ ಸದಸ್ಯರಾಗಿದ್ದರು. ನ್ಯೂ ಬ್ರಾನ್‌ಫೆಲ್ಸ್‌ನಲ್ಲಿ ಆಯೋಜಿಸಲಾಗಿದ್ದ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಇವರೆಲ್ಲರೂ ಒಂದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎಂದು ಕ್ಲಬ್‌ನ ಅಧ್ಯಕ್ಷರು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳು ಮತ್ತು ಲಭ್ಯವಿರುವ ಮಾಹಿತಿಯ ಪ್ರಕಾರ, ವಿಮಾನವು ಅತಿ ವೇಗವಾಗಿ ಬಂದು ಮರಗಳಿಗೆ ಅಪ್ಪಳಿಸಿದೆ. ಡಿಕ್ಕಿ ಹೊಡೆದ ತಕ್ಷಣ ವಿಮಾನದಲ್ಲಿ ಭಾರಿ ಬೆಂಕಿ ಹೊತ್ತಿಕೊಂಡಿದ್ದು, ವೈಮಾನಿಕ ಚಿತ್ರಗಳಲ್ಲಿ ವಿಮಾನವು ಸಂಪೂರ್ಣವಾಗಿ ನಜ್ಜುಗುಜ್ಜಾಗಿರುವುದು ಕಂಡುಬಂದಿದೆ.
ವಿಮಾನವು ನೆಲಕ್ಕೆ ಅಪ್ಪಳಿಸುವ ಮುನ್ನವೇ ರೇಡಾರ್ ಸಂಪರ್ಕದಿಂದ ಕಣ್ಮರೆಯಾಗಿತ್ತು. ಅಲ್ಲದೆ, ವಿಮಾನದಲ್ಲಿದ್ದ ತುರ್ತು ಸೂಚಕ ಸಾಧನವು ಅಪಾಯದ ಸಂಕೇತಗಳನ್ನು ರವಾನಿಸಿತ್ತು ಎಂದು ವರದಿಯಾಗಿದೆ.
ತಾಂತ್ರಿಕ ದೋಷ ಅಥವಾ ಹವಾಮಾನ ವೈಪರೀತ್ಯ ಈ ಅಪಘಾತಕ್ಕೆ ಕಾರಣವೇ ಎಂಬ ಬಗ್ಗೆ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.



