Kannada NewsKarnataka NewsLatest

*ಪ್ರಧಾನಿ ಮೋದಿ ಸಂಚರಿಸುವ ಮಾರ್ಗದಲ್ಲಿ ಜಿಲೆಟಿನ್ ಪತ್ತೆ ಪ್ರಕರಣ: ತನಿಖೆಗೆ ನಾಲ್ಕು ತಂಡ ರಚನೆ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಹೊರವಲಯದ ಆರ್ಟ್ ಆಫ್ ಲಿವಿಂಗ್‌ನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಭದ್ರತೆಯಲ್ಲಿ ಲೋಪ ಉಂಟಾಗಿದ್ದು, ಮೋದಿ ತೆರಳುವ ರಸ್ತೆ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಜಿಲೆಟಿನ್ ಕಡ್ಡಿಗಳು ಪತ್ತೆ ಬಗ್ಗೆ ಕಗ್ಗಲಿಪುರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಪೊಲೀಸರು ತನಿಖೆಗೆ 4 ತಂಡ ರಚನೆ ಮಾಡಿ ವಿವಿಧ ಆಯಾಮಗಳಲ್ಲಿ ವಿಚಾರಣೆ ಆರಂಭಿಸಿದ್ದಾರೆ.

ಬೆಂಗಳೂರು ಹೊರವಲಯದ ಕಗ್ಗಲೀಪುರ ಸಮೀಪ ಇರುವ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಲಾದ ಧ್ಯಾನ ಮಂದಿರ ಉದ್ಘಾಟನೆ ಹಾಗೂ ಸಂಸ್ಥೆಯ 45ನೇ ವಾರ್ಷಿಕೋತ್ಸವ ಹಿನ್ನೆಲೆ ಪ್ರಧಾನಿ ಮೋದಿ ಆಗಮಿಸಿದ್ದರು. ಕಾರ್ಯಕ್ರಮ ಮುಗಿಸಿ ವಾಪಸ್ ತೆರಳಿದ ಬಳಿಕ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಮೋದಿ ತೆರಳುವ ರಸ್ತೆ ಮಾರ್ಗದಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿರೋದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ಕಗ್ಗಲೀಪುರ ಸಮೀಪದ ತಾತಗುಣಿ ಬಳಿಯ ರಸ್ತೆ ಪಕ್ಕದಲ್ಲಿ ಪೊಲೀಸರ ಪರಿಶೀಲನೆ ವೇಳೆ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ತಕ್ಷಣ ಪೊಲೀಸರು ಜಿಲೆಟಿನ್ ಕಡ್ಡಿಗಳನ್ನ ವಶಕ್ಕೆ ಪಡೆದಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಕರಣದ ತನಿಖೆಗೆ ರಾಮನಗರ ಡಿವೈಎಸ್ಪಿ ಶ್ರೀನಿವಾಸ್ ನೇತೃತ್ವದಲ್ಲಿ ನಾಲ್ಕು ತಂಡಗಳ ರಚನೆ ಮಾಡಲಾಗಿದ್ದು, 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿಗಳ ಪರಿಶೀಲನೆ ಮಾಡಲಾಗುತ್ತಿದ್ದು, ಸ್ಥಳಕ್ಕೆ ಜಿಲೆಟಿನ್ ಕಡ್ಡಿ ಹೇಗೆ ಬಂತು, ಯಾರು ಅದನ್ನ ತಂದು ರಸ್ತೆ ಪಕ್ಕ ಹಾಕಿದ್ದಾರೆ ಎಂಬ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಅಲ್ಲದೇ ಜಿಲೆಟಿನ್ ಕಡ್ಡಿ ಬಳಸುವ ಕಲ್ಲುಕ್ವಾರಿ ಮಾಲೀಕರು ಹಾಗೂ ಕಾರ್ಮಿಕರ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button