ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಆತ್ಮ ನಿರ್ಭರ್ ಭಾರತದ ಮೂಲಕ ಆಮದು ನಿಲ್ಲಿಸಬೇಕಾಗಿದೆ. ಕೊರೊನಾ ವೈರಸ್ ನ ಈ ಆಪತ್ತನ್ನು ಅವಕಾಶವಾಗಿ ಬಳಸಿಕೊಳ್ಳಬೇಕಾಗಿದೆ. ಆತ್ಮವಿಶ್ವಾಸದಿಂದ ಮುಂದೆ ಸಾಗಬೇಕಿದೆ. ಆತ್ಮ ನಿರ್ಭರ ಭಾರತ ನಿರ್ಮಾಣ ಆಂದೋಲನ ಶುರುವಾಗಿದೆ. ಈ ಮೂಲಕ ಭಾರತವನ್ನು ಸ್ವಾವಲಂಭಿ ಮಾಡಲು ಬಹುದೊಡ್ಡ ಹೆಜ್ಜೆ ಇಡಬೇಕಿದೆ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ದೇಶದ 41 ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಕೊರೋನಾ ಬಿಕ್ಕಟ್ಟನ್ನೇ ಭಾರತ ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳಲಿದೆ. ಆಮದು ವಸ್ತುಗಳ ಮೇಲೆ ಅವಲಂಬಿತವಾಗಿರುವುದನ್ನು ಭಾರತ ಕಡಿಮೆ ಮಾಡಲಿದೆ ಎಂದು ಹೇಳಿದ್ದಾರೆ.
ಲಾಕ್ ಡೌನ್ ನಿಂದಾಗಿ ಕಲ್ಲಿದ್ದಲು ಕ್ಷೇತ್ರದ ಮೇಲೆ ಪರಿಣಾಮ ಬಿದ್ದಿದೆ. ಭಾರತ ಕಲ್ಲಿದ್ದಲು ಉತ್ಪಾದನೆಯಲ್ಲಿವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ. ಕಲ್ಲಿದ್ದಲು ಆಮದಿನಲ್ಲೂ ಭಾರತ 2ನೇ ಸ್ಥಾನದಲ್ಲಿರುವುದು ವಿಪರ್ಯಾಸ. ಆರ್ಥಿಕತೆಯಲ್ಲಿ ವಿಶ್ವದಲ್ಲಿ ಭಾರತ 5ನೇ ಸ್ಥಾನದಲ್ಲಿದೆ. ಆರ್ಥಿಕತೆಯಲ್ಲೂ ಭಾರತ ದೊಡ್ದ ರಾಷ್ಟ್ರವಾಗಿದೆ. ನಾವೇಕೆ ದೊಡ್ಡ ರಫ್ತುದಾರ ದೇಶವಾಗಬಾರದು? ಆಮದಿಗಿಂತ ರಫ್ತಿಗೆ ಹೆಚ್ಚು ಒತ್ತು ನೀಡಬೇಕಿದೆ ಎಂದರು.
ಗಣಿಗಾರಿಕೆ ಜತೆಗೆ ಸಂಪನ್ಮೂಲ ರಕ್ಷಣೆಯೂ ನಮ್ಮ ಕರ್ತವ್ಯ. 2030ರ ವೇಳೆಗೆ 100 ಮಿಲಿಯನ್ ಟನ್ ಕಲ್ಲಿದ್ದಲು ಗ್ಯಾಸ್ ಆಗಿ ಪರಿವರ್ತನೆ ಮಾಡಲಾಗುವುದು. ಸರ್ಕಾರದ ಈ ಹೊಸ ನಿರ್ಧಾರ ಮುಂದಿ 5-7 ವರ್ಷಗಳಲ್ಲಿ ದೇಶದಲ್ಲಿ ಸುಮಾರು 33 ಸಾವಿರ ಕೋಟಿ ರೂ. ಹೂಡಿಕೆಯನ್ನು ನಿರೀಕ್ಷಿಸುತ್ತಿದೆ ಎಂದರು. ಈ ಗಣಿಗಳು ದೇಶದ ಆರ್ಥಿಕತೆಗೆ ಒಟ್ಟು 20 ಸಾವಿರ ಕೋಟಿ ರೂ. ಆದಾಯ ನೀಡುತ್ತಿವೆ ಎಂದು ಹೇಳಿದರು.
ವಿದ್ಯುತ್, ಉಕ್ಕು, ಅಲ್ಯುಮಿನಿಯಂ ಮತ್ತು ಸ್ಪಾಂಜ್ ಉಕ್ಕು ಸೇರಿದಂತೆ ವಿವಿಧ ಮೂಲ ಕೈಗಾರಿಕೆಗಳ ಒಳಹರಿವಿಗೆ ಮುಖ್ಯ ಮೂಲವಾಗಿರುವ ಗಣಿಗಾರಿಕೆ ವಲಯದಲ್ಲಿ ದೇಶ ಸ್ವಾವಲಂಬನೆ ಸಾಧಿಸುವ ದೃಷ್ಟಿಕೋನವನ್ನು ಬಿಡಿಸಿಟ್ಟರು. ನಾವು ಕೇವಲ ಕಲ್ಲಿದ್ದಲು ಗಣಿಗಾರಿಕೆಯ ಹರಾಜು ಮಾತ್ರವಲ್ಲ, ಈ ಮೂಲಕ ನಾವು ಕಲ್ಲಿದ್ದಲು ವಲಯವನ್ನು ದಶಕಗಳ ಲಾಕ್ ಡೌನ್ ನಿಂದ ಹೊರಗೆಳೆಯುತ್ತಿದ್ದೇವೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ