Latest

ಹಸೆ ಮಣೆ ಏರಬೇಕಿದ್ದ ಪೊಲೀಸ್ ಅಧಿಕಾರಿಯ ಪುತ್ರಿ ಗೆಳತಿಯ ಪತಿಯಿಂದಲೇ ಕೊಲೆಯಾದಳು

ಪ್ರಗತಿ ವಾಹಿನಿ ಸುದ್ದಿ. ನವದೆಹಲಿ – ಕೆಲವೇ ದಿನಗಳಲ್ಲಿ ಹಸೆ ಮಣೆ ಏರಬೇಕಿದ್ದ ಪೊಲೀಸ್ ಅಧಿಕಾರಿಯ ಪುತ್ರಿಯೊಬ್ಬಳು ಗೆಳತಿಯ ಪತಿಯಿಂದಲೇ ಹತ್ಯೆಗೀಡಾದ ದಾರುಣ ಘಟನೆ ಉತ್ತರ ದೆಹಲಿಯಲ್ಲಿ ನಡೆದಿದೆ. ಹತ್ಯೆ ಆರೋಪಿ ತಲೆ ಮರೆಸಿಕೊಂಡಿದ್ದು ಪೊಲೀಸರು ಶೋಧ ನಡೆಸಿದ್ದಾರೆ.

ಹತ್ಯೆ ನಡೆದಿದ್ದು ಹೇಗೆ ?

ಪೊಲೀಸ್ ಅಧಿಕಾರಿಯ ಪುತ್ರಿಯ ಗೆಳತಿ ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು ಆಕೆಯ ಪತಿ ವಿಮಾ ಏಜೆಂಟ್ ಆಗಿದ್ದಾನೆ. ಪತ್ನಿಗೆ ಸೀರೆಯನ್ನು ಉಡುಗೊರೆ ನೀಡುವ ಸಲುವಾಗಿ ಸಹಾಯ ಮಾಡುವಂತೆ ಕಳೆದ ಶುಕ್ರವಾರ ಆರೋಪಿ ಪೊಲೀಸ್ ಅಧಿಕಾರಿಯ ಪುತ್ರಿಗೆ ಕರೆ ಮಾಡಿದ್ದಾನೆ. ಹೆಂಡತಿಗೆ ಸೀರೆ ಉಡುಗೊರೆ ಕೊಡುವುದಿದೆ, ಸೀರೆ ಆಯ್ಕೆ ಮಾಡಲು ಬಾ ಎಂದು ಫೋನ್‌ನಲ್ಲಿ ತಿಳಿಸಿದ್ದಾನೆ. ತನ್ನ ಸ್ನೇಹಿತೆಯ ಪತಿ ಸೀರೆ ಆಯ್ಕೆ ಮಾಡಲು ಕರೆದಿದ್ದಾನೆ ಎಂದು ಯುವತಿ ತನ್ನ ಮನೆಯವರಿಗೆ ತಿಳಿಸಿದ್ದಾಳೆ. ಈ ವೇಳೆ ಆರೋಪಿ ಸ್ವತಃ ತಾನೇ ಪೊಲೀಸ್ ಅಧಿಕಾರಿಯ ಮನೆ ಬಳಿ ಬಂದು ಯುವತಿಯನ್ನು ಮೋಟರ್‌ಸೈಕಲ್‌ನಲ್ಲಿ ಕರೆದೊಯ್ದಿದ್ದಾನೆ.

ಪೊಲೀಸರಿಂದ ಬಂತು ಮರಣ ವಾರ್ತೆ.

ಸಂಜೆಯಾದರೂ ಯುವತಿ ಮನೆಗೆ ವಾಪಸ್ ಬರದಿದ್ದಾಗ ಕುಟುಂಬದವರು ಯುವತಿಯ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಆದರೆ ಫೋನ್ ಸ್ವಿಚ್ ಆಫ್ ಬಂದಿದೆ. ಎಂದೂ ತನ್ನ ಮಗಳು ಫೋನ್ ಸ್ವಿಚ್ ಆಫ್ ಮಾಡದವಳು ಯಾಕೆ ಸ್ವಿಚ್ ಆಫ್ ಮಾಡಿದ್ದಾಳೆ ಎಂದು ಅನುಮಾನಗೊಂಡ ಯುವತಿಯ ತಾಯಿ ಅವಳ ಗೆಳತಿ, ಆರೋಪಿಯ ಹೆಂಡತಿಗೆ ಕರೆ ಮಾಡಿದಾಗ ಅವಳ ಫೋನ್ ಕೂಡ ಸ್ವಿಚ್ ಆಪ್ ಬಂದಿದೆ.

ಅಷ್ಟರಲ್ಲೇ ಪೊಲೀಸ್ ಠಾಣೆಯಿಂದ ಕರೆ ಬಂದಿದ್ದು ಸ್ಟೇಷನ್‌ಗೆ ಬರುವಂತೆ ತಿಳಿಸಿದ್ದಾರೆ. ಠಾಣೆಗೆ ಹೋದಾಗ ಮಗಳನ್ನು ಕತ್ತು ಹಿಸುಕಿ  ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಬೆಳಕಿಗೆ ಬಂದಿದ್ದು ಹೇಗೆ ?

ಯುವತಿಯ ಸ್ನೇಹಿತೆ ಮಾಲ್‌ನಿಂದ ಕೆಲಸ ಮುಗಿಸಿ ಬಂದಾಗ ಯುವತಿಯ ಶವ ಬೆಡ್‌ರೂಮ್‌ನಲ್ಲಿ ಬಿದ್ದಿತ್ತು. ಅಲ್ಲದೇ ಪತಿ ನಾಪತ್ತೆಯಾಗಿದ್ದು ಆತನ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ವಿಷಯ ಅರಿತ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಮದುವೆಯ ಕರೆಯೋಲೆ ಹಂಚಲು ಹೋಗಿದ್ದ ತಂದೆ

ಕೊಲೆಯಾದ ಯುವತಿ ೨೦ ವರ್ಷದವಳಾಗಿದ್ದು ಕೆಲವೇ ದಿನಗಳಲ್ಲಿ ಅವಳ ಮದುವೆ ನಿಶ್ಚಯವಾಗಿತ್ತು. ಆಕೆಯ ತಂದೆ ಪೊಲೀಸ್ ಅಧಿಕಾರಿ ಮಗಳ ಮದುವೆಯ ಕರೆಯೋಲೆ ವಿತರಿಸಲು ಮಧ್ಯಪ್ರದೇಶದ ತಮ್ಮ ಊರಿಗೆ ತೆರಳಿದ್ದರು. ಆದರೆ ಯುವತಿ ಕೊಲೆಯಾಗಿರುವ ಸುದ್ದಿ ಬರ ಸಿಡಿಲಿನಂತೆ ಕುಟುಂಬದ ಮೇಲೆ ಎರಗಿದೆ.

ಆರೋಪಿಯು ತಲೆ ಮರೆಸಿಕೊಂಡಿದ್ದು ಆತನಿಗಾಗಿ ಹುಡುಕಾಟ ನಡೆಸಲಾಗಿದೆ ಎಂದು ದೆಹಲಿ ಉತ್ತರ ವಲಯದ ಡಿಸಿಪಿ ಸಾಗರ್ ಸಿಂಗ್ ಕಾಲ್ಸಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಮೇರಿಕದ ಖ್ಯಾತ ಕಿರುತೆರೆ ನಟಿ ಶವವಾಗಿ ಪತ್ತೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button