*ಜಗತ್ತಿನ 3ನೇ ಅತಿದೊಡ್ಡ ಆರ್ಥಿಕ ಶಕ್ತಿ ಭಾರತ: ಮೋದಿ ಗ್ಯಾರಂಟಿಯ ಬಿಜೆಪಿ ಪ್ರಣಾಳಿಕೆ ಮಾದರಿ: ಪ್ರಹ್ಲಾದ ಜೋಶಿ ಪ್ರತಿಪಾದನೆ*
ಪ್ರಗತಿವಾಹಿನಿ ಸುದ್ದಿ: ಭಾರತವನ್ನು ಜಗತ್ತಿನ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ರೂಪುಗೊಳಿಸುವ ಮೋದಿ ಗ್ಯಾರಂಟಿಯುಳ್ಳ ಬಿಜೆಪಿ ಪ್ರಣಾಳಿಕೆ ಮಾದರಿ, ಮಾರ್ಗದರ್ಶಿ ಆಗಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಇಂದು ಡಾ. ಅಂಬೇಡ್ಕರ್ 133ನೇ ಜಯಂತ್ಯುತ್ಸವ ವೇಳೆ ಮಾದ್ಯಮದವರೊಂದಿಗೆ ಮಾತನಾಡಿದರು.
ಅಂಬೇಡ್ಕರ್ ಆಶಯದಂತೆ ಸರ್ವ ಸಮಾನತೆ, ವಿಕಸಿತ ಭಾರತ ನಿರ್ಮಾಣವೇ ಮೋದಿ ಗ್ಯಾರೆಂಟಿಯಾಗಿದೆ. ವಿಕಸಿತ ಭಾರತ ಸರ್ವರ ಅಭಿವೃದ್ಧಿಯ ದ್ಯೋತಕವಾಗಿದೆ ಎಂದು ಹೇಳಿದರು.
ರೈತರ ಏಳಿಗೆ, ಮಹಿಳೆಯರ ಸಶಕ್ತಿಕರಣ, ಕೂಲಿ, ಕಾರ್ಮಿಕರ ಸಶಕ್ತಿಕರಣ ಸೇರಿದಂತೆ ಸಂಪೂರ್ಣ ಬಡತನ ನಿರ್ಮೂಲನೆಯ ಮೋದಿ ಸಂಕಲ್ಪದ ನಮ್ಮ ಪ್ರಣಾಳಿಕೆ ಮಾದರಿಯಾಗಿದೆ ಎಂದು ಪ್ರತಿಪಾದಿಸಿದರು.
ಜಗತ್ತಿನಲ್ಲಿ 5ನೇ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿರುವ ಭಾರತವನ್ನು ಮುಂದಿನ 5 ವರ್ಷಗಳಲ್ಲಿ 3ನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಅಭಿವೃದ್ಧಿ ಪಡಿಸುವುದೇ ಮೋದಿ ಪರಿವಾರದ ಗುರಿ ಎಂದು ಸಚಿವ ಜೋಶಿ ಹೇಳಿದರು.
ಸೂರ್ಯ-ಚಂದ್ರ ಇರೋವರೆಗೂ ಅಂಬೇಡ್ಕರ್ ಸ್ಮರಣಿಯ: ಜಗತ್ತಿನಲ್ಲಿ ಸೂರ್ಯ-ಚಂದ್ರ ಇರೋವರೆಗೂ ನಮ್ಮ ಹೆಮ್ಮೆಯ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸ್ಮರಣಿಯ ಎಂದು ಜೋಶಿ ಬಣ್ಣಿಸಿದರು.
ಸರ್ವ ವರ್ಗಗಳ ಸುಧಾರಣೆಗೆ ಅತ್ಯಂತ ಸ್ಪಷ್ಟ ನಿಲುವುಗಳನ್ನು ತಳೆದ ಸಂವಿಧಾನ ರಚನೆಕಾರ ಅಂಬೇಡ್ಕರ್ ಒಬ್ಬ ಮಹಾನ್ ಪುಣ್ಯಾತ್ಮ ಎಂದು ಹೇಳಿದರು.
ದ್ವೇಷದ ಲವಲೇಶವು ಇಲ್ಲದ ಪುಣ್ಯಾತ್ಮ: ಅಸ್ಪೃಶ್ಯತೆಯ ಕರಾಳ ಅನುಭವವಾದರೂ ಸಂವಿಧಾನ ರಚನೆ ವೇಳೆ ಅಂಬೇಡ್ಕರ್ ಅದ್ಯಾವ ದ್ವೇಷ ಭಾವನೆ ಹೊಂದದೆ, ದ್ವೇಷದ ಲವ ಲೇಷವೂ ಇಲ್ಲದಂತೆ ಎಲ್ಲರಿಗೂ ನ್ಯಾಯ ಒದಗಿಸಿಕೊಟ್ಟು ಕೆಲಸ ಮಾಡಿದ ಒಬ್ಬ ಮಹಾನ್ ಪುಣ್ಯಾತ್ಮ ಎಂದು ಸಚಿವ ಜೋಶಿ ಸ್ಮರಿಸಿದರು.
ಅಂಬೇಡ್ಕರ್ ಸಲಹೆ ಸ್ವೀಕರಿಸದೆ ಇರೋದು ದುರ್ದೈವ: ಆಗಿನ ಕಾಲದಲ್ಲೇ ಹಿಂದೂ ಸಮಾಜದ ಪುನರಚನೆ ಬಗ್ಗೆ ಬಾಬಾ ಸಾಹೇಬ್ ಅಂಬೇಡ್ಕರ್ ಸಲಹೆ ಕೊಟ್ಟರು. ಆದರೆ, ಅದನ್ನು ಸ್ವೀಕರಿಸದೇ ಇರುವುದು ನಮ್ಮ ದೌಭಾರ್ಭಗ್ಯ ಎಂದು ಪ್ರಹ್ಲಾದ ಜೋಶಿ ಇದೇ ವೇಳೆ ವಿಷಾದ ವ್ಯಕ್ತಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ