*ಜಾತಿ ಗಣತಿ ಸಮೀಕ್ಷೆ ಹಿಂದೂಗಳನ್ನು ಬಿಡಿ ಬಿಡಿಯಾಗಿ ಒಡೆಯುವ ಹುನ್ನಾರ: ಪ್ರತಾಪ್ ಸಿಂಹ ಆಕ್ರೋಶ*

ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹೆಸರಲ್ಲಿ ರಾಜ್ಯ ಸರ್ಕಾರ ನಡೆಸಲು ಮುಂದಾಗಿರುವ ಜಾತಿ ಗಣತಿ ಸರ್ವೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಸರ್ಕಾರದ ಈ ಕ್ರಮ ಖಂಡನೀಯ ಎಂದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಜಾತಿ ಗಣತಿ ಸಮೀಕ್ಷೆ ಹೆಸರಲ್ಲಿ ಹಿಂದೂಗಳನ್ನು ಬಿಡಿ ಬಿಡಿಯಾಗಿ ಒಡೆಯಲು ಹೊರಟಿದೆ ಎಂದು ಕಿಡಿಕಾರಿದರು.
ಪ್ರತಿಯೊಂದು ಹಿಂದೂ ಸಮುದಾಯಗಳನ್ನು, ಉಪ ಜಾತಿಗಳನ್ನು ಒಡೆದು ಬಿಡಿಬಿಡಿಗೊಳಿಸಿ ರಾಜಕೀಯ ತಂತ್ರ ನಡೆಸಲು ಮುಂದಾಗಿದ್ದಾರೆ. ಬ್ರಾಹ್ಮಣ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್, ಲಿಂಗಾಯಿತ ಕ್ರಿಶ್ಚಿಯನ್ ಇದೆಲ್ಲವೂ ಎಲ್ಲಿಂದ ಬಂದಿದೆ? ಜಾತಿಗಳನ್ನು ಒಡೆಯುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಕ್ರಿಶ್ಚಿಯನ್, ಮುಸ್ಲಿಂರನ್ನು ಹೆಚ್ಚಿಗೆ ತೋರಿಸಲು ರಾಜಕೀಯ ದುರುದ್ದೇಶಕ್ಕೆ ಇಂತಹ ಕೆಲಸ ಮಾಡುತ್ತಿರುವುದು ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಸಮುದಾಯದ ಸ್ವಾಮೀಜಿಗಳು, ಶ್ರೀ ಶ್ರೀ ಶ್ರೀ ಎಂದು ಹೆಸರಿಟ್ಟುಕೊಂಡಿರುವವರು ರಾಜ್ಯ ಸರ್ಕಾರದ ಈ ದುರುದ್ದೇಶದ ಕ್ರಮವನ್ನು ಪ್ರಶ್ನಿಸಿ ತಿಳಿಹೇಳಿ. ಹಿಂದೂ ಸಮಾಜದ ಪ್ರತಿನಿಧಿಗಳಾಗಿರುವ ನೀವು ಸರ್ಕಾರದ ಇಂತಹ ಕೆಲಸವನ್ನು ಸರಿಪಡಿಸಬೇಕು. ಹಿಂದೂ ಸಮಾಜ ಒಡೆಯಲು ಹೊರಟಿರುವ ಸಿದ್ದರಾಮಯ್ಯ ಅವರ ಕ್ರಮವನ್ನು ತಡೆಯಬೇಕು ಎಂದು ಕೇಳಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.