
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರಿಗೆ ತೀವ್ರ ಹೃದಯಾಘಾತವಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವಿಕ್ರಂ ಆಸ್ಪತ್ರೆಯ ತಜ್ಞ ವೈದ್ಯ ಡಾ.ರಂಗನಾಥ್ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈದ್ಯರು, ಪುನೀತ್ ರಾಜ್ ಕುಮಾರ್ ತೀವ್ರ ಎದೆನೋವಿನಿಂದ ಬಳಲುತ್ತಿದ್ದರು ಬೆಳಿಗ್ಗೆ 11:30ಕ್ಕೆ ಆಸ್ಪತ್ರೆಗೆ ಆಗಮಿಸಿದ್ದರು. ವಿಕ್ರಂ ಆಸ್ಪತ್ರೆಗೆ ಬರುವ ಮೊದಲೇ ಇಸಿಜಿ ಮಾಡಿಸಿಕೊಂಡು ಬಂದಿದ್ದರು. ಅವರು ಆಸ್ಪತ್ರೆಗೆ ಬರುವಷ್ಟರಲ್ಲೇ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು. ಅವರಿಗೆ ಎಲ್ಲಾರೀತಿಯ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಅವರ ಆರೋಗ್ಯದ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಆರೋಗ್ಯ ಸ್ಥಿತಿ ಕ್ಷಣ ಕ್ಷಣಕ್ಕೂ ಕ್ಷೀಣಿಸುತ್ತಿದ್ದು, ವಿಕ್ರಂ ಆಸ್ಪತ್ರೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆಯುತ್ತಿದ್ದಾರೆ.
ಜಿಮ್ ಮಾಡುವಾಗ ಇಂದು ಬೆಳಿಗ್ಗೆ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪುನೀತ್ ಅವರನ್ನು ರಮಣಶ್ರೀ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ರಂ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಪುನೀತ್ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಆದರೆ ಅವರ ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ವಿಕ್ರಂ ಆಸ್ಪತ್ರೆಗೆ ಸಿಎಂ ಬಸವರಾಜ್ ಬೊಮ್ಮಾಯಿ ದೌಡಾಯಿಸಿದ್ದಾರೆ.
ಇನ್ನೊಂದೆಡೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಸಚಿವ ಆರ್.ಅಶೋಕ್, ಹಿರಿಯ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಟ ರವಿಚಂದ್ರನ್, ಯಶ್, ರಾಘವೇಂದ್ರ ರಾಜ್ ಕುಮಾರ್, ನಿರ್ಮಾಪಕರು, ನಿರ್ದೇಶಕರು ಆಸ್ಪತ್ರೆಗೆ ಧಾವಿಸಿದ್ದು, ಪುನೀತ್ ಆರೋಗ್ಯ ವಿಚಾರಿಸುತ್ತಿದ್ದಾರೆ.
ಪುನಿತ್ ರಾಜ್ ಕುಮಾರ ಸ್ಥಿತಿ ಚಿಂತಾಜನಕ; ಸಿಎಂ ಸೇರಿ ಹಲವು ಗಣ್ಯರು ಆಸ್ಪತ್ರೆಗೆ ದೌಡು