
ಪ್ರಗತಿವಾಹಿನಿ ಸುದ್ದಿ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ ಮುಖಂಡನ ಪುತ್ರ ಕೃಷ್ಣ ಜೆ ರಾವ್ ನ ಲವ್ ಸೆಕ್ಸ್ ದೋಖಾ ಪ್ರಕರಣ ಮಹತ್ವದ ಘಟ್ಟಕ್ಕೆ ಬಂದು ನಿಂತಿದೆ. ಆರೋಪಿಯ ಡಿಎನ್ ಎ ವರದಿ ಬಹಿರಂಗವಾಗಿದೆ.
ಸಂತ್ರಸ್ತ ಯುವತಿಯ ಪರವಾಗಿ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಬಿಜೆಪಿ ಮುಖಂಡನ ಪುತ್ರ ಕೃಷ್ಣ ಜೆ ರಾವ್, ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಗರ್ಭವತಿಯನ್ನಾಗಿ ಮಾಡಿ ಕೈಕೊಟ್ಟ ಪ್ರಕರಣದಲ್ಲಿ ಸಂತ್ರಸ್ತ ಯುವತಿ ಕೆಲ ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆರೋಪಿ ಕೃಷ್ಣ ಜೆ ರಾವ್ ಮಗುವನ್ನು ಸ್ವೀಕರಿಸಲು, ಸಿದ್ಧನಿರಲಿಲ್ಲ. ಸಂತ್ರಸ್ತ ಯುವತಿ ಕುಟುಂಬದವರು ಕಾನೂನು ಹೋರಾಟ ನಡೆಸಿದ್ದರು. ಆರೋಪಿ ಕುಟುಂಬದವರು ಡಿಎನ್ ಎ ಟೆಸ್ಟ್ ಮಾಡಿಸಲಿ ಎಂದಿದ್ದರು. ಅದರಂತೆ ಪುತ್ತೂರು ನ್ಯಾಯಾಧೀಶರ ಸಮ್ಮುಖದಲ್ಲಿ ಆರೋಪಿ ಕೃಷ್ಣ ರಾವ್ ಹಾಗೂ ಸಂತ್ರಸ್ತೆ ಹಾಗೂ ಮಗುವಿನ ರಕ್ತ ಸಂಗ್ರಹಿಸಲಾಗಿತ್ತು. ಬಳಿಕ ಡಿಎನ್ ಎ ಟೆಸ್ಟ್ ಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಡಿಎನ್ ಎ ಟೆಸ್ಟ್ ನಲ್ಲಿ ಪಾಸಿಟಿವ್ ಬಂದಿದೆ. ಯುವತಿ ಗರ್ಭವತಿಯಾಗಲು ಕಾರಣ ಹಾಗೂ ಮಗುವಿನ ತಂದೆ ಕೃಷ್ಣ ಜೆ ರಾವ್ ಎಂಬುದು ದೃಢಪಟ್ಟಿದೆ ಎಂದರು.
ಹಾಗಾಗಿ ಹಿಂದೂ ಸಂಘಟನೆಗಳು ಮುಂದೆ ನಿಂತು ಇಬ್ಬರ ಮದುವೆ ಮಾಡಿಸಬೇಕು. ಸಂತ್ರಸ್ತ ಯುವತಿಯ ಕುಟುಂಬದವರು ನಮಗೆ ಹೋರಾಟ ಇಷ್ಟವಿಲ್ಲ. ಇಬ್ಬರೂ ಒಂದಾಗಿ ಬಾಳಬೇಕು ಎಂಬುದು ನಮ್ಮ ಉದ್ದೇಶ ಎಂದಿದ್ದಾರೆ. ಹಾಗಾಗಿ ಪುತ್ತೂರಿನಲ್ಲಿ ಹಿಂದೂ ಮುಖಂಡರು ಮುಂದೆ ಬಂದು ಈ ಎರಡು ಕುಟುಂಬಗಳನ್ನು ಒಂದು ಮಾಡಿ ಮದುವೆ ಮಾಡಿಸಲಿ ಎಂದು ಮನವಿ ಮಾಡಿದರು.