Karnataka NewsLatestPolitics

*ರಾಷ್ಟ್ರಭಕ್ತ ಸಂಘಟನೆ ಆರ್‌.ಎಸ್.ಎಸ್ ನ ಕಾನೂನು ಬದ್ಧತೆ, ದೇಶನಿಷ್ಠೆ ಪ್ರಶ್ನೆ ಮಾಡುತ್ತಿರುವುದು ನಾಚಿಕೆಗೇಡಿತನದ ಪರಮಾವಧಿ: ಆರ್.ಅಶೋಕ್ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ನೋಂದಣಿ ಹಾಗೂ ಕಾನೂನುಬದ್ಧತೆ ಬಗ್ಗೆ ಪ್ರಶ್ನಿಸಿ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ಪ್ರಿಯಾಂಕ್ ಖರ್ಗೆ ಕ್ರಮಕ್ಕೆ ಕಿಡಿಕಾರಿರುವ ವಿಪಕ್ಷ ನಾಯಕ ಆರ್.ಅಶೋಕ್, ದೇಶ ವಿಭಜನೆಗೆ ಕಾರಣವಾದ ಮುಸ್ಲಿಂ ಲೀಗ್‌ನಂತಹ ಅತ್ಯಂತ ವಿಭಜನಕಾರಿ, ದೇಶ ವಿದ್ರೋಹಿ ಸಂಘಟನೆಯೊಂದಿಗೆ ಕೇವಲ ಅಧಿಕಾರದ ಲಾಲಸೆಗಾಗಿ ರಾಜಕೀಯ ಮೈತ್ರಿ ಮಾಡಿಕೊಂಡು ಎರಡೆರಡು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಆರ್.ಎಸ್.ಎಸ್ ಬಗ್ಗೆ ಮಾತನಾಡುವ ನೈತಿಕತೆ ನಿಮಗೆ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.

Home add -Advt

ಪ್ರಜಾಪ್ರಭುತ್ವದ ಪವಿತ್ರ ದೇಗುಲ ವಿಧಾನಸೌಧದ ಮುಂದೆಯೇ ದೇಶ ವಿರೋಧಿಗಳು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಅಟ್ಟಹಾಸದಿಂದ ಘೋಷಣೆ ಕೂಗಿದರೂ, ಕಣ್ಣು-ಕಿವಿ ಮುಚ್ಚಿ ಕುಳಿತು, ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಉದ್ಧಟತನದಿಂದ ಸಮರ್ಥನೆ ಮಾಡಿಕೊಂಡ “ಸಚ್ಚಾರಿತ್ರ್ಯ” ಈ ಪ್ರಿಯಾಂಕ ಖರ್ಗೆ ಅವರದ್ದು. ಇಂತಹ ದೇಶದ್ರೋಹಿ ಮಾನಸಿಕತೆಯ ರಕ್ಷಕರು, ಕಳೆದ ನೂರು ವರ್ಷಗಳಿಂದ ಯಾವುದೇ ಅಪೇಕ್ಷೆಯಿಲ್ಲದೆ, ನಿಸ್ವಾರ್ಥವಾಗಿ ಭಾರತಾಂಬೆಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ರಾಷ್ಟ್ರಭಕ್ತ ಸಂಘಟನೆ ಆರ್‌.ಎಸ್.ಎಸ್ ನ ಕಾನೂನು ಬದ್ಧತೆ ಹಾಗೂ ದೇಶನಿಷ್ಠೆಯನ್ನು ಪ್ರಶ್ನೆ ಮಾಡುತ್ತಿರುವುದು ಹಾಸ್ಯಾಸ್ಪದ ಮಾತ್ರವಲ್ಲ, ನಾಚಿಕೆಗೇಡಿತನದ ಪರಮಾವಧಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಮುಂದೆ 2028ರ ವಿಧಾನಸಭಾ ಚುನಾವಣೆಯಲ್ಲೂ ನಾನೇ ಕಾಂಗ್ರೆಸ್‌ನ ಸಿಎಂ ಅಭ್ಯರ್ಥಿ ಎಂದು ಹಗಲುಗನಸು ಕಾಣುತ್ತಿರುವ ಡಿಕೆಶಿ ಅವರಿಗೆ ಸದ್ದಿಲ್ಲದಂತೆ ಸೆಡ್ಡು ಹೊಡೆಯಲು ಪ್ರಿಯಾಂಕ್ ಖರ್ಗೆ ಅವರ ಈ ರಾಜಕೀಯ ತಂತ್ರಗಾರಿಕೆ ಚೆನ್ನಾಗಿದೆ. ದೆಹಲಿಯ ನಕಲಿ ಗಾಂಧಿ ಹೈಕಮಾಂಡ್‌ನ ಓಲೈಕೆ ಮಾಡಿ, ಅವರನ್ನು ಮೆಚ್ಚಿಸಿ ಹೇಗಾದರೂ ಮಾಡಿ ತಾನೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಆಗಬೇಕೆಂಬ ದುರಾಸೆಯಿಂದ ಪ್ರಿಯಾಂಕ್ ಖರ್ಗೆ ಅವರು RSS ಅನ್ನು ಬೆದರು ಬೊಂಬೆ ಮಾಡಿಕೊಳ್ಳಲು ಹೊರಟಿದ್ದಾರೆ. ಸದಾ ಸಮಾಜದಲ್ಲಿ ಸೈದ್ಧಾಂತಿಕ ವಿವಾದ ಸೃಷ್ಟಿಸಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇವರು ನಡೆಸುತ್ತಿರುವ ಈ ಕುತಂತ್ರ ಮತ್ತು ಒಳಸಂಚು ಪ್ರಜ್ಞಾವಂತ ಕನ್ನಡಿಗರಿಗೆ ಅರ್ಥವಾಗದಷ್ಟು ರಹಸ್ಯವಾಗಿಯೇನೂ ಉಳಿದಿಲ್ಲ ಎಂದು ಆರೋಪಿಸಿದ್ದಾರೆ.

ತಮಗೆ ಈವರೆಗೂ ವಹಿಸಿಕೊಡಲಾಗಿದ್ದ ಐಟಿ-ಬಿಟಿ, ಗ್ರಾಮೀಣಾಭಿವೃದ್ಧಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಸೇರಿದಂತೆ ಪ್ರತಿಯೊಂದು ಇಲಾಖೆಯ ಜವಾಬ್ದಾರಿಯಲ್ಲೂ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಶೂನ್ಯ ಸಾಧನೆ ಮಾಡಿದ್ದು, ಈಗ ಹೇಗಾದರೂ ಮಾಡಿ ಗೃಹ ಇಲಾಖೆ ಬಳಸಿಕೊಂಡು ಹೈಕಮಾಂಡ್ ಗಮನ ಸೆಳೆಯಬೇಕು ಎಂಬ ಹಪಾಹಪಿಗೆ ಬಿದ್ದಿದ್ದಾರೆ. ಅದಕ್ಕಾಗಿ ದಿನದ 24 ಗಂಟೆಯೂ ‘ಆರ್ ಎಸ್ಎಸ್ ಜಪ’ ಮಾಡುತ್ತಾ, ಮಾಧ್ಯಮಗಳಲ್ಲಿ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿಯಲ್ಲಿರಲು ಹತಾಶ ಪ್ರಯತ್ನ ನಡೆಸುತ್ತಿದ್ದಾರೆ. ಇಂತಹ ಸವಕಲು ರಾಜಕೀಯ ತಂತ್ರಗಳಿಗೆ ಹಾಗೂ ದೇಶವಿರೋಧಿ ಧೋರಣೆಗಳಿಗೆ ಕರ್ನಾಟಕದ ಪ್ರಬುದ್ಧ ಜನತೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಗುಡುಗಿದ್ದಾರೆ.

Related Articles

Back to top button