*ಮೋದಿ ಕಾರ್ಪೊರೇಟ್ ಕಂಪನಿಗಳ 16 ಲಕ್ಷ ಕೋಟಿ ಸಾಲಮನ್ನಾ ಮಾಡಿದ್ದಾರೆ: ರಾಹುಲ್ ಗಾಂಧಿ*

ಪ್ರಗತಿವಾಹಿನಿ ಸುದ್ದಿ: ದೇಶದಲ್ಲಿ 25 ಶ್ರೀಮಂತ ಬಂಡವಾಳ ಶಾಹಿಗಳಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಕಾರ್ಪೊರೇಟ್ ಕಂಪನಿಗಳ 16 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡಿದ್ದಾರೆ. ನರೇಗಾ ಯೋಜನೆಯಡಿ 25 ವರ್ಷಗಳಲ್ಲಿ ಮಾಡಬಹುದಾದ ಕಾಮಗಾರಿಗಳಷ್ಟು ಹಣವನ್ನು ಈ ಶ್ರೀಮಂತರಿಗೆ ನೀಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಕೋಲಾರ ಲೋಕಸಭಾ ಕ್ಷೇತ್ರದ ಮಾಲೂರು ಹೊಸಕೋಟೆ ರಸ್ತೆಯ ಚೊಕ್ಕಂಡಹಳ್ಳಿ ಗೇಟ್ ಬಳಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಪ್ರಜಾಧ್ವನಿ-2 ಸಮಾವೇಶದಲ್ಲಿ ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು. ಇಂದು ಅದಾನಿ ಮಗನಿಗೆ ಅವರು ಊಹೆ ಮಾಡಿದ್ದನ್ನು ಪಡೆಯುವ ಶಕ್ತಿ ಇದೆ. ಅದಾನಿ ಯಾವುದೇ ಭೂಮಿ ಕೇಳಿದರೂ, ತಕ್ಷಣ ಕಡು ಬಡ ರೈತನ ಭೂಮಿಯನ್ನೂ ಸಹ ಮುಲಾಜಿಲ್ಲದೆ ಮೋದಿ ಕಿತ್ತು ಕೊಡುತ್ತಾರೆ. ಮುಂಬೈ ವಿಮಾನ ನಿಲ್ದಾಣ ಕೇಳಿದರೂ ಸಿಬಿಐ, ಈಡಿ, ಐಟಿ ಮೊದಲಾದ ತನಿಖಾ ಸಂಸ್ಥೆಗಳನ್ನು ಬಳಸಿ ಅದನ್ನೂ ಅದಾನಿಗೆ ಕೊಡುತ್ತಾರೆ ಎಂದು ಆಕ್ರೋಶ ಹೊರಹಾಕಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬಂದರೆ, ಪ್ರತಿ ಕುಟುಂಬದ ಹಿರಿಯ ಮಹಿಳೆಗೆ ವಾರ್ಷಿಕ ಒಂದು ಲಕ್ಷ ರೂ. ಜಾತಿ ಗಣತಿ, ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರಿಗೆ ಎಲ್ಲಾ ಸ್ತರದ ಉದ್ಯೋಗದಲ್ಲಿ ಅವಕಾಶಗಳು ಸೇರಿದಂತೆ 5 ಗ್ಯಾರಂಟಿಗಳನ್ನು ನೀಡುವ ಮೂಲಕ ದೇಶದ ರಾಜಕಾರಣದ ಮೇಲೆ ಹೊಸ ಕ್ರಾಂತಿಕಾರಿ ಬೆಳವಣಿಗೆಗೆ ನಾಂದಿ ಹಾಡಲಾಗುವುದು ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ