*ಕಾಲುವೆಗೆ ಬಟ್ಟೆ ತೊಳೆಯಲು ಹೋದ ಮಹಿಳೆ ನಾಪತ್ತೆ*
ಪ್ರಗತಿವಾಹಿನಿ ಸುದ್ದಿ; ಹoದಿಗುoದ: ಘಟಪ್ರಭಾ ಎಡದಂಡೆ ಕಾಲುವೆಗೆ ಬಟ್ಟೆ ತೊಳೆಯಲು ಹೋದ ಮಹಿಳೆ ನಾಪತ್ತೆಯಾಗಿರುವ ಘಟನೆ ರಾಯಬಾಗ ತಾಲೂಕು ಸುಲ್ತಾನಪುರ ಗ್ರಾಮದಲ್ಲಿ ನಡೆದಿದೆ.
ಸುಲ್ತಾನಪುರ ಗ್ರಾಮದ ಲಕ್ಷ್ಮಿ ಮಹಾದೇವ ಗೋಕಾಕ ವಯಸ್ಸು (23) ಕಾಣೆಯಾದವರು. ಇಂದು ಮುಂಜಾನೆ 8:30ಕ್ಕೆ ಬಟ್ಟೆ ತೊಳೆಯಲು ಕಾಲುವೆಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋದ ಮಹಿಳೆ ಕಾಣೆಯಾಗಿದ್ದು, ಮಹಿಳೆ ಕಾಲುವೆಗೆ ಕಾಲು ಜಾರಿ ಬಿದ್ದಿರಬಹುದು ಎಂದು ಮನೆಯವರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಾರೂಗೇರಿಯ ಠಾಣಾಧಿಕಾರಿ ಗಿರಮಲೢಪ್ಪ ಉಪ್ಪಾರ ಹಾಗೂ ಪೊಲೀಸ್ ತಂಡ ಕಾಲುವೆಗೆ ದೌಡಾಯಿಸಿ ಸ್ಥಳ ಪರಿಶೀಲನೆ ನಡೆಸಿ ರಾಯಬಾಗದಿಂದ ಅಗ್ನಿಶಾಮಕ ಠಾಣೆಯ ಸಿಬ್ಬಂದಿಯನ್ನು ಕರೆಯಿಸಿ ರಾತ್ರಿಯವರಿಗೆ ಶೋಧಕಾರ್ಯ ನಡೆಸಿದರೂ ಮಹಿಳೆಯ ಸುಳಿವು ಸಿಕ್ಕಿಲ್ಲ.
ಹಿಡಕಲ್ ಡ್ಯಾಮ್ ನ ಜಿಎಲ್‌ಬಿಸಿ ಹಿರಿಯ ಅಧಿಕಾರಿಗಳ ಜೊತೆಗೆ ಮಾತನಾಡಿ ಕಾಲುವೆಗೆ ಹರಿಯುವ ನೀರಿನ ಪ್ರಮಾಣ ಕಡಿಮೆ ಮಾಡುವಂತೆ ಠಾಣಾಧಿಕಾರಿ ಮನವಿ ಮಾಡಿದ್ದು, ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.
ನಾಪತ್ತೆಯಾಗಿರುವ ಮಹಿಳೆಗೆ ಗಂಡ, ಮೂರು ವರ್ಷದ ಗಂಡು ಮಗು, ಒಂದು ವರ್ಷದ ಹೆಣ್ಣು ಮಗು ಇದೆ ಎಂದು ತಿಳಿದು ಬಂದಿದೆ. ಮಹಿಳೆಗಾಗಿ ಶೋಧ ಕಾರ್ಯ ನಡೆದಿದ್ದು ಘಟನಾ ಸ್ಥಳಕ್ಕೆ ಹಾರೂಗೇರಿ ಪೊಲೀಸ್ ಠಾಣೆಯ ಸಿಪಿಐ ರವಿಚಂದ್ರನ್ ಬಡಪಕಿರಪ್ಪನವರ, ಪಿಎಸ್ಐ ಗಿರಿಮಲಪ್ಪ ಉಪ್ಪಾರ, ಹೆಚ್ಚುವರಿ ಪಿಎಸ್ಐ ಚಾಂದಭಿ ಗಂಗಾವತಿ ಹಾಗೂ ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ