Kannada NewsKarnataka NewsLatest

*ಕೇಳಿದಷ್ಟು ಹಣ ಕೊಡದಿದ್ದರೆ ಮಗನ ಮದುವೆ ದಿನವೇ ನಿನ್ನ ಕೊಲೆ: ರಿಯಲ್ ಎಸ್ಟೇಟ್ ಉದ್ಯಮಿಗೆ ಭೂಗತ ಪಾತಕಿ ಹೆಸರಲ್ಲಿ ಬೆದರಿಕೆ ಕರೆ*

ಪ್ರಗತಿವಾಹಿನಿ ಸುದ್ದಿ: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ಭೂಗತ ಪಾತಕಿ ವಿಕ್ಕಿ ಶೆಟ್ಟಿ ಹೆಸರಲ್ಲಿ ದುಷ್ಕರ್ಮಿಗಳು ಬೆದರಿಕೆ ಕರೆ ಮಾಡಿದ್ದು, ಕೇಳಿದಷ್ಟು ಹಣ ಕೊಡದಿದ್ದರೆ ನಿನ್ನ ಮಗನ ಮದುವೆ ದಿನವೇ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಬೆಂಗಳೂರಿನ ವಿದ್ಯಾರಣ್ಯಪುರದ ರಿಯಲ್ ಎಸ್ಟೇಟ್ ಉದ್ಯಮಿ ಶಂಕರ್ ಎಂಬವರಿಗೆ ದುಷ್ಕರ್ಮಿಗಳು ಜೀವ ಬೆದರಿಕೆ ಹಾಕಿದ್ದಾರೆ. ಶಂಕರ್ ಮೊಬೈಲ್‍ಗೆ ಇಂಟರ್‌ನೆಟ್‌ ಕರೆ ಮಾಡಿದ್ದ ಅಪರಿಚಿತ, ತಾನು ವಿಕ್ಕಿಶೆಟ್ಟಿ ಎಂದು ಹೇಳಿಕೊಂಡಿದ್ದ. ಬಳಿಕ ಕೇಳಿದಷ್ಟು ಹಣ ಕೊಡದಿದ್ದರೆ ಮೇನಲ್ಲಿ ವಾರದಲ್ಲಿ ನಿಗದಿಯಾಗಿರುವ ನಿಮ್ಮ ಮಗನ ಮದುವೆ ವೇಳೆ ನಿನ್ನನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಈ ಕರೆಯನ್ನು ಉದ್ಯಮಿ ಶಂಕರ್ ನಿರ್ಲಕ್ಷಿಸಿದ್ದರು.

ಇದಾದ ಬಳಿಕ ಪುನಃ ಬೇರೆ ಬೇರೆ ನಂಬರ್‌ನಿಂದ ಆರೇಳು ಬಾರಿ ಕರೆಮಾಡಿ ಪುನಃ ಹಣಕ್ಕೆ ಬೇಡಿಕೆ ಇಡಲಾಗಿದೆ. ಬೆದರಿಕೆ ಕರೆಗಳಿಂದ ಕಂಗಾಲಾಗಿದ್ದ ಶಂಕರ್, ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು. ಇತ್ತಿಚೆಗೆ ಪುತ್ರನ ಮದುವೆ ಮುಗಿದ ಬಳಿಕ ವಿಕ್ಕಿ ಶೆಟ್ಟಿಯ ಕುರಿತು ತಿಳಿದುಕೊಂಡಿದ್ದ ಅವರು, ಆತನೇ ಈ ಕರೆಗಳನ್ನು ಮಾಡಿಸಿದ್ದನೇ? ಅವನ ಸಹಚರರ ಪಾತ್ರವಿದೆಯೇ? ಇಲ್ಲವೇ ಉದ್ಯಮ ವೈಷಮ್ಯ ಹಿನ್ನೆಲೆಯಲ್ಲಿ ಬೇರೆಯವರು ಕರೆ ಮಾಡಿ ಬೆದರಿಸಿದ್ದರೇ ಎಂಬ ಶಂಕೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಎಫ್‌ಐಆರ್‌ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಮಂಗಳೂರು ಮೂಲದ ವಿಕ್ಕಿ ಶೆಟ್ಟಿ ದೇಶದ ಮೋಸ್ಟ್ ವಾಂಟೆಡ್ ಪಾತಕಿಗಳ ಪಟ್ಟಿಯಲ್ಲಿ ಒಬ್ಬ. ಎರಡು ದಶಕಗಳಿಗೂ ಹೆಚ್ಚಿನ ಕಾಲದಿಂದ ಈತ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button