ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (GPT) ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳು ಹಾಗೂ ಬಿಬಿಎಂಪಿ ವ್ಯಾಪ್ತಿಯ ಬೆಂಗಳೂರು ದಕ್ಷಿಣೋತ್ತರ ಶೈಕ್ಷಣಿಕ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳ ಅಭ್ಯರ್ಥಿಗಳ ದಾಖಲೆ ಪರಿಶೀಲನೆಗೆ ಸಿದ್ಧತೆ ಕೈಗೊಳ್ಳಲು ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕರಿಗೆ ಸೂಚಿಸಿದೆ.
ಬೆಂಗಳೂರು ದಕ್ಷಿಣ ಹಾಗೂ ಉತ್ತರ ಶೈಕ್ಷಣಿಕ ಜಿಲ್ಲೆಗಳು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಕಲಬುರ್ಗಿ, ಬೀದರ್, ರಾಯಚೂರು, ಬಳ್ಳಾರಿ, ವಿಜಯನಗರ ಯಾದಗಿರಿ ಮತ್ತು ಕೊಪ್ಪಳ ಭಾಗದ ನೇಮಕಾತಿ ಪ್ರಕ್ರಿಯೆಗೆ ಈಗಾಗಲೇ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಹೀಗಾಗಿ ಉಳಿದ 26 ಜಿಲ್ಲೆಗಳಲ್ಲಿನ ನೇಮಕಾತಿ ಪ್ರಕ್ರಿಯೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಈ 26 ಜಿಲ್ಲೆಗಳ 1:1 ಅಂತಿಮ ಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಮೂಲ ದಾಖಲೆಗಳ ನೈಜತ್ವ ಪರಿಶೀಲನೆ ಕಾರ್ಯ ಕೈಗೊಳ್ಳಲು ಸಿದ್ಧತೆಗಳನ್ನು ನಡೆಸಲು ಇಲಾಖೆ ಸೂಚಿಸಿದೆ.
ಅಭ್ಯರ್ಥಿಗಳ ವೈದ್ಯಕೀಯ ಪ್ರಮಾಣಪತ್ರ, ಪೊಲೀಸ್ ಇಲಾಖೆಯಿಂದ ನೀಡಲಾದ ಪರಿಶೀಲನಾ ಪ್ರಮಾಣಪತ್ರ, ಸಿಂಧುತ್ವ ಗ್ರಾಮೀಣ ಹಾಗೂ ಕನ್ನಡ ಮಾಧ್ಯಮ ಪ್ರಮಾಣಪತ್ರಗಳು, ಮಾಜಿ ಸೈನಿಕರು, ಯೋಜನೆಗಳ ನಿರಾಶ್ರಿತರು, ವಿಕಲಚೇತನರ ಪ್ರಮಾಣಪತ್ರಗಳು, ಎಲ್ಲ ಮೂಲ ಅಂಕಪಟ್ಟಿಗಳು ಮತ್ತು ಪ್ರಮಾಣಪತ್ರಗಳು, ಸೇವಾ ನಿರತ ಶಿಕ್ಷಕರು ಸಲ್ಲಿಸಿರುವ ನಿರಾಕ್ಷೇಪಣಾ ಪ್ರಮಾಣಪತ್ರಗಳ ನೈಜತ್ವವನ್ನು ಪರಿಶೀಲನೆಗೆ ಒಳಪಡಿಸಲು ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳುವಂತೆ ಇಲಾಖೆ ಉಪನಿರ್ದೇಶಕರಿಗೆ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ