
ಪ್ರಗತಿವಾಹಿನಿ ಸುದ್ದಿ: ಆರ್.ಎಸ್.ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಅಮಾನತುಗೊಂಡಿದ್ದ ಇಬ್ಬರು ಶಿಕ್ಷಕರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಶಾಲಾ ಸಾಕ್ಷರತಾ ಇಲಾಖೆ ಹೊರಡಿಸಿದ್ದ ಅಮಾನತು ಆದೇಶಕ್ಕೆ ಕಲಬುರಗಿ ಕೆಎಟಿ (ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ) ತಡೆಯಾಜ್ಞೆ ನೀಡಿದೆ. ಆರ್.ಎಸ್.ಎಸ್ ಪಥಸಂಚಲನದಲ್ಲಿ ಭಾಗಿಯಾದಿದ್ದ ಹಿನ್ನೆಲೆಯಲ್ಲಿ ಶಿಕ್ಷಕರಾದ ಗುರುರಾಜ ಜೋಶಿ ಹಾಗೂ ಅಣ್ಣಾ ಸಾಹೇಬ ದೇಶಮುಖ ಅವರು ಸಸ್ಪೆಂಡ್ ಆಗಿದ್ದರು.
ಗಣಾವೇಶ ಧರಿಸಿ ಆರ್.ಎಸ್.ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದಕ್ಕೆ ಕಲಬುರಗಿ ಜಿಲ್ಲೆಯ ಹುಣಸಗಿ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಗುರುರಾಜ ಜೋಶಿ ಹಾಗೂ ಕುಪ್ಪಿ ಶಾಲೆಯ ಶಿಕ್ಷಕ ಅಣ್ಣಾ ಸಾಹೇಬ ದೇಶಮುಖ ಅವರನ್ನು ಅಮಾನತುಗೊಳಿಸಲಾಗಿತ್ತು. ಶಾಲಾ ಸಾಕ್ಷರತಾ ಇಲಾಖೆ ಡಿಡಿ ಚನ್ನಬಸ್ಸಪ್ಪ ಮಧೋಳ ಆಗಸ್ಟ್ 20ರಂದು ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು.
ಅಮಾನತು ಆದೇಶ ಪ್ರಶ್ನಿಸಿ ಇಬ್ಬರು ಶಿಕ್ಷಕರು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣದ ಕಲಬುರಗಿ ವಿಭಾಗದಲ್ಲಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ಕೆಎಟಿ ಶಿಕ್ಷಕರ ಅಮಾನತು ಆದೇಶಕ್ಕೆ ತಡೆಯಾಜ್ಞೆ ನೀಡಿದೆ.


