Kannada NewsKarnataka NewsLatest

*ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಗೆ ‘ದಾಸೋಹ ರತ್ನ’ ಪ್ರಶಸ್ತಿ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ಅಕ್ಷರ, ಆರೋಗ್ಯ ಮತ್ತು ಪೌಷ್ಟಿಕ ಆಹಾರ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್‌ನ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಗೆ ಬಸವ ಸಮಿತಿಯು ಪ್ರತಿಷ್ಠಿತ ‘ದಾಸೋಹ ರತ್ನ’ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.

Home add -Advt


ಬಸವ ಸಮಿತಿಯ 62ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಬಸವ ಸಮಿತಿಯ ಸಂಸ್ಥಾಪಕ, ಮಾಜಿ ಉಪರಾಷ್ಟ್ರಪತಿ ಡಾ. ಬಿ.ಡಿ. ಜತ್ತಿ ಅವರ 114ನೇ ಜಯಂತ್ಯುತ್ಸವದ ಅಂಗವಾಗಿ ಸೆಪ್ಟೆಂಬರ್ 10ರಂದು ಬೆಂಗಳೂರಿನ ಬಸವ ಸಮಿತಿಯ ಅನುಭವ ಮಂಟಪದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.


‘ವಸುಧೈವ ಕುಟುಂಬಕಂ–ಒಂದು ಜಗತ್ತು, ಒಂದು ಕುಟುಂಬ’ ಎಂಬ ಭಾರತೀಯ ಚಿಂತನೆಯ ಆಧಾರದಲ್ಲಿ ಸೇವೆ, ಅಧ್ಯಾತ್ಮ ಮತ್ತು ಮಾನವೀಯ ಮೌಲ್ಯಗಳನ್ನು ಸಮನ್ವಯಗೊಳಿಸಿ ಜಾಗತಿಕ ಮಟ್ಟದಲ್ಲಿ ನಿಸ್ವಾರ್ಥ ಸೇವಾ ಕಾರ್ಯಗಳನ್ನು ಮುನ್ನಡೆಸುತ್ತಿರುವ ಸದ್ಗುರು ಮಧುಸೂದನ ಸಾಯಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಮಿತಿ ತಿಳಿಸಿದೆ.


ಬೆಳಗ್ಗೆ 10 ಗಂಟೆಗೆ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸುತ್ತೂರು ಕ್ಷೇತ್ರದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಬೇಲಿಮಠದ ಶ್ರೀ ಶಿವರುದ್ರ ಮಹಾಸ್ವಾಮಿ ಭಾಗವಹಿಸುತ್ತಾರೆ.


ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಹಸಿದವರಿಗೆ ಅನ್ನ, ಅಗತ್ಯವಿರುವವರಿಗೆ ಆರೋಗ್ಯ ಸೇವೆ, ಮಕ್ಕಳಿಗೆ ಶಿಕ್ಷಣ ಹಾಗೂ ಪ್ರತಿಯೊಬ್ಬರಿಗೂ ಗೌರವಯುತ ಬದುಕಿನ ಅವಕಾಶ ಕಲ್ಪಿಸುತ್ತಿದ್ದು, ಅವರ ಸೇವಾ ದೃಷ್ಟಿಕೋನವು ಬಸವಣ್ಣನವರ ದಾಸೋಹ ತತ್ವದೊಂದಿಗೆ ಸಾಮ್ಯ ಹೊಂದಿದೆ ಎಂದು ಸಮಿತಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Related Articles

Back to top button