Kannada NewsKarnataka NewsLatest

*ಸಾರ್ವಜನಿಕರೇ ಇರಲಿ ಎಚ್ಚರ! ಸಾಧುಗಳ ವೇಷದಲ್ಲಿ ಬಂದು ಹೂವು ನೀಡಿ ಸಮ್ಮೋಹನ: ಹಣ, ಚಿನ್ನಾಭರಣ ದೋಚುತ್ತಿದೆ ಖದೀಮರ ಗ್ಯಾಂಗ್*

ಪ್ರಗತಿವಾಹಿನಿ ಸುದ್ದಿ: ಸಾಧು-ಸಂತರ ವೇಷದಲ್ಲಿ ಬಂದು ಕಳ್ಳರ ಗ್ಯಾಂಗ್ ವೊಂದು ಹೂವು ನೀಡಿ, ಸಮ್ಮೋಹನಗೊಳಿಸಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಇಂತದ್ದೊಂದು ಗ್ಯಾಂಗ್ ಆಕ್ಟೀವ್ ಆಗಿದ್ದು, ಸಾರ್ವಜನಿಕರು, ಅಂಗಡಿ ಮಾಲೀಕರಿಂದ ಹಣ, ಚಿನ್ನಾಭರಣ ಪಡೆದು ಎಸ್ಕೇಪ್ ಆಗುತ್ತಿದೆ.

ಸಿಂಧನೂರಿನ ‘ಸಾಯಿ ಮೆಡಿಕಲ್ಸ್’ ಫಾರ್ಮಸಿಗೆ ಸಾಧುವೊಬ್ಬ ಬಂದಿದ್ದು, ಬಿಸಿಲಿನ ತಾಪಕ್ಕೆ ಬಾಯಾರಿಕೆಯಾಗುತ್ತಿದೆ. ಸ್ವಲ್ಪ ಕುಡಿಯಲು ನೀರು ಕೊಡಿ ಎಂದಿದ್ದಾನೆ. ಮೆಡಿಕಲ್ ಅಂಗಡಿಯ ಮಾಲೀಕರಾದ ವಿಷ್ಣುದತ್ತು ಮಾನವೀಯತೆ ಹಾಗೂ ಸಾಧುಗಳ ಮೇಲಿನ ಭಕ್ತಿಯಿಂದ ಅಂಗಡಿಯ ಫ್ರಿಡ್ಜ್‌ನಿಂದ ತಣ್ಣನೆಯ ನೀರನ್ನು ತಂದುಕೊಟ್ಟಿದ್ದಾರೆ. ನೀರು ಕುಡಿದ ಸಾಧು, ಮಾಲೀಕರ ಭಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದವನಂತೆ ನಾಟಕವಾಡಿದ್ದಾನೆ. ನಿನಗೆ ಮತ್ತು ನಿನ್ನ ಮಕ್ಕಳಿಗೆ ಒಳಿತಾಗಲಿದೆ. ನಿಮ್ಮ ಸಂಕಷ್ಟಗಳೆಲ್ಲವೂ ದೂರಾಗಲಿವೆ ಎಂದು ಹರಸುತ್ತಾ ತನ್ನ ಕೈಯಲ್ಲಿದ್ದ ಎರಡು ಹೂವುಗಳನ್ನು ವಿಷ್ಣುದತ್ತು ಅವರ ಕೈಗೆ ನೀಡಿದ್ದಾನೆ.

ಸಾಧು ನೀಡಿದ ಎರಡು ಹೂವುಗಳ ಪರಿಮಳಕ್ಕೆ ಕೆಲವೇ ಕ್ಷಣಗಳಲ್ಲಿ ಮಾಲೀಕನಿಗೆ ಮಂಕು ಬಡಿದಂತಾಗಿದ್ದು, ಸಮ್ಮೋಹನಕ್ಕೆ ಒಳಗಾಗಿದ್ದಾರೆ. ತನ್ನ ಮೇಲೆ ತನಗೆ ಹಿಡಿತ ಕಳೆದುಕೊಂಡು ಖುದ್ದು ತಾನೇ ತನ್ನ ಜೇಬಿನಲ್ಲಿದ್ದ 10 ಸಾವಿರ ರೂಪಾಯಿ ನಗದು ಹಣ ಮತ್ತು ಕೈಯಲ್ಲಿದ್ದ ಬಂಗಾರದ ಉಂಗುರವನ್ನು ಬಿಚ್ಚಿ ಖದೀಮ ಸಾಧುವಿನ ಕೈಗೆ ಕೊಟ್ಟಿದ್ದಾರೆ. ಹಣ ಮತ್ತು ಚಿನ್ನ ಪಡೆದ ಸಾಧು ಸ್ಥಳದಿಂದ ಕಾಲ್ಕಿತ್ತಾನೆ.

ಕೆಲ ಹೊತ್ತಿನ ಬಳಿಕ ವಿಷ್ಣುದತ್ತು ಅವರು ಸಹಜ ಸ್ಥಿತಿಗೆ ಮರಳಿದ್ದಾರೆ. ಆಗಲೇ ಗೊತ್ತಾಗಿದ್ದು, ಸಾಧು ನೀಡಿದ ಹೂವಿನಿಂದಾದ ಅವಾಂತರಕ್ಕೆ ತಾನು ಹಣ, ಉಂಗುರ ನೀಡಿ ಮೋಸ ಹೋಗಿದ್ದು. ಅಂಗಡಿ ಸಿಸಿಟಿವಿ ಪರಿಶೀಲಿಸಿದಾಗ ಸಾಧುವಿನ ಕೈಚಳಕ ಸ್ಪಷ್ಟವಾಗಿದೆ.

ತಕ್ಷಣ ಸಿಂಧನೂರು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಕಾರ್ಯಪ್ರವೃತ್ತರಾಗಿ ಸಾಯಿ ಮೆಡಿಕಲ್ಸ್ ಹಾಗೂ ಸುತ್ತಮುತ್ತಲಿನ ಅಂಗಡಿಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದಾಗ ಸಿಂಧನೂರಿನ ಹಲವೆಡೆ ಸಾಧುಗಳ ವೇಷದಲ್ಲಿರುವ ಗ್ಯಾಂಗ್ ವೊಂದು ಅನುಮಾನಾಸ್ಪದವಾಗಿ ಓಡಾಡುತ್ತಾ, ಸಾರ್ವಜನಿಕರಿಂದ ಹಣ, ಒಡವೆ ದೋಚುತ್ತಿರುವುದು ಬೆಳಕಿಗೆ ಬಂದಿದೆ.

ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button