Film & EntertainmentKannada NewsKarnataka NewsLatest

*ಲಿಡ್ಕರ್ ಉತ್ಪನ್ನಗಳ ಬ್ರ್ಯಾಂಡ್ ಅಂಬಾಸಿಡರ್ ಆಗಿ ನಟ ಡಾಲಿ ಧನಂಜಯ್ ನೇಮಕ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್ ವುಡ್ ಜನಪ್ರಿಯ ನಟ, ನಿರ್ಮಾಪಕ ಡಾಲಿ ಧನಂಜಯ್ ಅವರನ್ನು ಲಿಡ್ಕರ್ ಉತ್ಪನ್ನಗಳ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ, ಲಿಡ್ಕರ್ ಉತ್ಪನ್ನಗಳಿಗೆ ಡಾಲಿ ಧನಂಜಯ್ ಅವರನ್ನು ರಾಯಭಾರಿಯಾಗಿ ನೇಮಕ ಮಾಡಲಾಗಿದ್ದು, ಉಚಿತವಾಗಿ ಈ ಕೆಲಸ ಮಾಡುತ್ತಿದ್ದಾರೆ ಎಂದರು.

ಉದಯೋನ್ಮುಖ ಹಾಗೂ ಸಾಮಾಜಿಕ ಕಳಕಳಿ ಉಳ್ಳ ನಟರಾಗಿರುವ ಧನಂಜಯ್, ಲಿಡ್ಕರ್ ಉತ್ಪನ್ನಗಳ ಪ್ರದರ್ಶನಕ್ಕೆ ರಾಯಭಾರಿಯಾಗಿ ಮಾಡಿರುವುದು ಅರ್ಥಪೂರ್ಣ ವಾಗಿದೆ. ಇದರಿಂದ ಲಿಡ್ಕರ್ ಉತ್ಪನ್ನಗಳು ಹೆಚ್ಚಾಗಿ ಮಾರಾಟವಾಗುವುದಲ್ಲದೆ ಚರ್ಮ ಉದ್ಯಮಕ್ಕೆ ಉತ್ತೇಜನ ದೊರೆಯಲಿದೆ ಎಂದು ತಿಳಿಸಿದ್ದಾರೆ.

ವಿಧಾನಸೌಧದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರು ನಟ ಧನಂಜಯ ಅವರನ್ನು ಲಿಡ್ಕರ್ ರಾಯಭಾರಿಯಾಗಿ ಘೋಷಿಸಿದರು. ಇದೇ ಮೊದಲ ಬಾರಿಗೆ ಲಿಡ್ಕರ್ ಗೆ ರಾಯಭಾರಿಯನ್ನು ಆಯ್ಕೆ ಮಾಡಿದ್ದು ವಿಶೇಷ.

ಸ್ಯಾಂಡಲ್‌ವುಡ್ ನಲ್ಲಿ ನಟನಾಗಿ ನಿರ್ಮಾಪಕನಾಗಿ ಡಾಲಿ ಸಿಕ್ಕಾಪಟ್ಟೆ ಬ್ಯುಸಿ ಇರುವ ಸ್ಟಾರ್. ನಟನೆ, ನಿರ್ಮಾಣದ ಜೊತೆಗೀಗ ಧನಂಜಯ ಜಾಹೀರಾತು ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಮೊದಲ ಬಾರಿಗೆ ಡಾಲಿ ಸರ್ಕಾರದ ಜಾಹೀರಾತಿನಲ್ಲಿ ಮಿಂಚುವ ಮೂಲಕ ಚರ್ಮ ಕುಶಲಕರ್ಮಿಗಳ ಕುಟುಂಬದ ನೆರವಿಗೆನಿಂತಿದ್ದಾರೆ.

ವಿಶೇಷ ಎಂದರೆ ಲಿಡ್ಕರ್ ರಾಯಭಾರಿಯಾಗಲು ಧನಂಜಯ ಅವರು ಒಂದು ರೂಪಾಯಿ ಸಂಭಾವನೆಯನ್ನು ಕೂಡ ಪಡೆದಿಲ್ಲ. ಉಚಿತವಾಗಿ ಲಿಡ್ಕರ್ ಬ್ರಾಂಡ್ ಪ್ರಮೋಟ್ ಮಾಡುವ ಮೂಲಕ ಧನಂಜಯ್ ಮಾದರಿಯಾಗಿದ್ದಾರೆ. ಡಾ. ಬಿ ಆರ್ ಅಂಬೇಡ್ಕರ್ ಅವರ 67ನೇ ಪುಣ್ಯ ಸ್ಮರಣೆ ದಿನವೇ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ವಿಶೇಷವಾಗಿತ್ತು. ಸಿಎಂ ಸಿದ್ದರಾಮಯ್ಯ ಮತ್ತು ಧನಂಜಯ ಅವರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮ ಪ್ರಾರಂಭಿಸಿದರು.

ಲಿಡ್ಕರ್ ನಲ್ಲಿ 50 ಸಾವಿರಕ್ಕೂ ಹೆಚ್ಚು ಚರ್ಮ ಕುಶಲಕರ್ಮಿಗಳ ಕುಟುಂಬವಿದೆ. ಚರ್ಮ ಕೈಗಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಇದೀಗ ರಾಯಭಾರಿಯನ್ನ ಆಯ್ಕೆ ಮಾಡಿ ಈ ನಿಗಮವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಮುಂದಾಗಿರುವ ಸರ್ಕಾರಕ್ಕೆ ಡಾಲಿ ರಾಯಾಭಾರಿಯಾಗುವ ಮೂಲಕ ಬಡವರ ಮಕ್ಕಳು ಬೆಳಿಬೇಕು ಎನ್ನುವುದನ್ನು ಮತ್ತೆ ಸಾರಿ ಹೇಳಿದ್ದಾರೆ.


ಘೋಷಣೆ ಬಳಿಕ ಮಾತನಾಡಿದ ಧನಂಜಯ, ‘ಇದರ ಅಡಿ ಐವತ್ತು ಸಾವಿರ ಕುಟುಂಬವಿದೆ. ನಮ್ಮದೇ ಆದ ಬ್ರಾಂಡಿಗೆ ನಾವು ಸಹಾಯ ಮಾಡಬೇಕು ಎನ್ನುವ ಕಾರಣಕ್ಕೆ ಇದನ್ನು ಒಪ್ಪಿಕೊಂಡೆ. ಮೇಕ್ ಇನ್ ಇಂಡಿಯಾ ಹೇಗಿದೆಯೋ ಹಾಗೆ ಮೇಕ್ ಇನ್ ಕರ್ನಾಟಕ ಆಗಬೇಕು. ಲಿಟ್ಕರ್ ಗೆ ಸಪೋರ್ಟ್ ಮಾಡುವುದರಿಂದ ಅದನ್ನೆ ನಂಬಿಕೊಂಡ ಕುಟುಂಬಗಳಿಗೆ ಸಹಾಯವಾಗಲಿದೆ. ಮೈಸೂರ್ ಸಿಲ್ಕ್ ಹೇಗಿದಿಯೋ ಹಾಗೆ ನಮ್ಮದೆ ಬ್ರ್ಯಾಂಡ್ ಇರಬೇಕು’ ಎಂದರು.

ಸಿಎಂ ಸಿದ್ಧರಾಮಯ್ಯ ಅವರು ಮಾತನಾಡಿ, ‘ಖ್ಯಾತ ನಟ ದಾಳಿ ಧನಂಜಯ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಿದ್ದೀವಿ. ಅವರು ಉಚಿತವಾಗಿ ರಾಯಭಾರಿ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ಕಳಕಳಿ ಇರುವ ನಟ, ಅವರನ್ನು ರಾಯಭಾರಿಯನ್ನಾಗಿ ಮಾಡಿದ್ದು ಅರ್ಥಪೂರ್ಣವಾಗಿದೆ. ಇದರಿಂದ ಚರ್ಮ ಉದ್ಯಮಕ್ಕೆ ಉತ್ತೇಜನ ಆಗುತ್ತೆ’ ಎಂದು ಹೇಳಿದರು.


ಬಳಿಕ ಲಿಟ್ಕರ್ ಕೇಂದ್ರಕ್ಕೆ ಭೇಟಿ ನೀಡಿದ ನಟ ಧನಂಜಯ ಅವರಿಗೆ ವಿಶೇಷವಾಗಿ ತಯಾರಿಸಿದ್ದ ಲಿಡ್ಕರ್ ಚಪ್ಪಲಿಯನ್ನು ಉಡುಗೊರೆಯಾಗಿ ನೀಡಿದರು. ಧನಂಜಯವರಿಗಾಗಿಯೇ ವಿಶೇಷವಾಗಿ ಚಪ್ಪಲಿಯನ್ನು ತಯಾರಿಸಲಾಗಿತ್ತು. ಡಾಲಿ ಹೊಸ ಚಪ್ಪಲಿಯನ್ನು ಧರಿಸಿ ಅಲ್ಲಿನ ಕುಶಲಕರ್ಮಿಗಳ ಜೊತೆ ಮಾತನಾಡಿ ಖುಷಿಪಟ್ಟರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button