*ಶಾಸಕ ಶರಣು ಸಲಗರ, ಕಾರ್ಮಿಕ ಸಚಿವ ಸಂತೋಷ್ ಲಾಡ್ ವಾಗ್ವಾದ: ವಿಧಾನಸಭೆಯಲ್ಲಿ ತಾರಕಕ್ಕೇರಿದ ಮಾತಿನ ಚಕಮಕಿ*

ಪ್ರಗತಿವಾಹಿನಿ ಸುದ್ದಿ: ವಿಧಾನಸಭೆಯ ಕಲಾಪದ ವೇಳೆ ಬಜೆಟ್ ಕುರಿತ ಚರ್ಚೆಯ ಅವಧಿಯಲ್ಲಿ ಬಿಜೆಪಿ ಶಾಸಕ ಶರಣು ಸಲಗರ ಅವರು ಗೋ ಹತ್ಯೆಯ ಬಗ್ಗೆ ಮಾತನಾಡಿದ್ದು, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.
ಗೋವಿನ ರಕ್ಷಣೆ ಮತ್ತು ಗೋಮಾಂಸ ರಫ್ತು ಕುರಿತ ವಿಷಯ ಲಾಡ್ ಹಾಗೂ ಸಲಗರ ಅವರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.
ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ಶಾಸಕ ಶರಣು ಸಲಗಾರ್ ಅವರು, ಚಾಮರಾಜಪೇಟೆಯಲ್ಲಿ ನಡೆದ ಹಸು ಕೆಚ್ಚಲು ಕೊಯ್ದ ಪ್ರಕರಣ ಪ್ರಸ್ತಾಪಿಸಿ ಮಾತು ಆರಂಭಿಸಿದರು. ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸಂತೋಷ್ ಲಾಡ್ ಅವರು, ಬಜೆಟ್ ಬಗ್ಗೆ ಮಾತನಾಡಿ, ಅದು ಬಿಟ್ಟು ಕೆಚ್ಚಲು, ಹಾಲು, ತಾಯಿ ಅಂತೆಲ್ಲ ಭಾವನಾತ್ಮಕ ವಿಷಯಗಳನ್ನು ಎಳೆದು ತರುವುದು ಸರಿ ಅಲ್ಲ” ಎಂದರು.
“ಭಾರತ ಗೋಮಾಂಸ ರಫ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ಇದರ ಬಗ್ಗೆಯೂ ಮಾತನಾಡಿ. ಸುಮ್ಮನೇ ಏನೋ ಮಾತನಾಡಬೇಡಿ? ಎಂದು ಲಾಡ್ ಅವರು ಟಾಂಗ್ ನೀಡಿದರು. ಇದರಿಂದ ಇಡೀ ಸದನದಲ್ಲಿ ಗದ್ದಲದ ವಾತಾವರಣ ಉಂಟಾಯಿತು.
*ಗೋವಿನ ಬಗ್ಗೆ ಇಷ್ಟು ಕರುಣೆ, ಮಮತೆ, ಗೋವಿನ ನೋವಿನ ಬಗ್ಗೆ ಮಾತನಾಡಿ. ಈ ದೇಶದಲ್ಲಿ ಪ್ರಪಂಚದಲ್ಲಿ ಬೀಫ್ ರಫ್ತು ಬ್ಯಾನ್ ಆಗಬೇಕು ಎಂದು ಹೇಳಿ. ಒತ್ತಿ ಒತ್ತಿ ಹೇಳಿ. ನನಗೆ ಸಂಕಟ ಇದೆ ಅಂತ ಹೇಳಿ” ಎಂದು ಲಾಡ್ ಅವರು ಅಕ್ರೋಶವ್ಯಕ್ತಪಡಿಸಿದರು.
“ಈ ದೇಶದಲ್ಲಿ ಕಥೆಗಳು ನಡೆಯುವುದಿಲ್ಲ, ವಾಸ್ತವಾಂಶಗಳ ಮೇಲೆ ಮಾತನಾಡಿ, ಆಕಳು ಬಂದು ಗಂಟೆ ಹೊಡೆಯುತ್ತೆ. ಇವೆಲ್ಲ ಬೇಕಿಲ್ಲ. ಬಜೆಟ್ ಮೇಲೆ ಮಾತನಾಡಿ. ಸುಮ್ನೆ ಡ್ರಾಮಾ ಮಾಡಬೇಡಿ” ಎಂದು ಆಗ್ರಹಿಸಿದರು.
ಮಾತನಾಡಲು ಬಿಡಿ ಎಂದು ಮನವಿ ಮಾಡಿದ ಸಲಗರ
ಸಲಗರ ಅವರ ಮಾತಿಗೆ ಪದೇ ಪದೇ ಸಂತೋಷ್ ಲಾಡ್ ಅವರು ಆಕ್ಷೇಪ ವ್ಯಕ್ತಪಡಿಸಿದಾಗ ತಮಗೆ ಮಾತನಾಡಲು ಅವಕಾಶ ನೀಡಿ ಎಂದು. ಅಣ್ಣಾ ನೀವು ಸೀನಿಯರ್ ಮೋಸ್ಟ್. ನಿಮಗೆ ಕೈ ಮುಗಿತೀನಿ. ನನಗೆ ಮಾತನಾಡಲು ಅವಕಾಶ ನೀಡಿ ಲಾಡ್ ಅವರಲ್ಲಿ ಮನವಿ ಮಾಡಿದ್ದು ಗಮನ ಸೆಳೆಯಿತು.
ಕುಂಭಮೇಳಕ್ಕೆ 65 ಕೋಟಿ: ಸಲಗರ ಮಾತಿಗೆ ಲಾಡ್ ಆಕ್ಷೇಪ
ಪ್ರಯಾಗ್ ರಾಜ್ ನಲ್ಲಿ ನಡೆದ ಕುಂಭಮೇಳದಲ್ಲಿ ಭಾಗಿಯಾದವರು ಎಷ್ಟು ಕೋಟಿ ಎಂಬುದರ ಬಗ್ಗೆಯೂ ಕಲಾಪದಲ್ಲಿ ಚರ್ಚೆ ನಡೆಯಿತು. ಆಗ ಶರಣು ಸಲಗರ ಅವರು, ‘ಕುಂಭಮೇಳಕ್ಕೆ 65 ಕೋಟಿ ಜನರು ಹೋಗಿದ್ದರು’ ಎಂದರು. ಈ ಮಾತಿಗೆ ಸಹ ಸಂತೋಷ್ ಲಾಡ್ ಆಕ್ಷೇಪ ವ್ಯಕ್ತಪಡಿಸಿದರು.
“ಕುಂಭಮೇಳಕ್ಕೆ 7 ಸಾವಿರ ರೈಲುಗಳು ಹೋಗಿರಬಹುದು, ಈಗಿನದ್ದೆಲ್ಲ ಸೇರಿಸಿದರೂ 10 ಸಾವಿರ ರೈಲುಗಳಲ್ಲಿ ಜನರು ಹೋಗಿರಬಹುದು. ಇನ್ನು 3 ಸಾವಿರ ವಿಮಾನಗಳು ಹೋಗಿವೆ. ಇವರು 65 ಕೋಟಿ, 70 ಕೋಟಿ ಜನ ಹೋಗಿದ್ರು ಅಂತ ಹೇಳುತ್ತೀರಲ್ಲ?. 65 ಕೋಟಿ ಜನ ಹೇಗೆ ಆಗುತ್ತೆ ಹೇಳಿ? ಎಂದು ಸಂತೋಷ್ ಲಾಡ್ ಪ್ರಶ್ನಿಸಿದರು. 65 ಕೋಟಿ ಜನ ಹೋಗಿಲ್ಲ. ಇದು ಸುಳ್ಳು ಮಾಹಿತಿ ಎಂದರು.
ಬಿಜೆಪಿಯವರಿಗೆ ಸುಳ್ಳು ಹೇಳೋದೇ ಕೆಲಸ. ಸುಳ್ಳು ಬಿಟ್ಟು ಮತ್ತೇನೂ ಹೇಳಲ್ಲ ಎಂದು ಲಾಡ್ ಕುಟುಕಿದರು.