
ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ: ಚಿಕ್ಕಬೆಳ್ಳಿಕಟ್ಟಿ ಸರಕಾರಿ ಪ್ರೌಢ ಶಾಲೆಯಲ್ಲಿ ಸಣ್ಣವೀರಪ್ಪ ಚನ್ನಬಸಪ್ಪ ಹೊಂಗಲ ಪ್ರತಿಷ್ಠಾನದ ಗಾಂಧಿ ಅಧ್ಯಯನ ಕೇಂದ್ರದಿಂದ ಹಮ್ಮಿಕೊಂಡಿದ್ದ ವಿಶ್ವ ಶಾಂತಿಯ ದಿನಾಚರಣೆ ಮತ್ತು ಬಾ-ಬಾಪು 150ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಸರ್ವೋದಯ ಮಂಡಳ ಉದ್ಘಾಟಿಸಲಾಯಿತು.
ಈ ವೇಳೆ ಮಾತನಾಡಿದ ಕರ್ನಾಟಕ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಹೆಚ್ ಬಿ ವಾಲಿಕಾರ ಅವರು, ಯಾವಾಗ ಮನುಷ್ಯನ ಚಿಂತನಾ ಶಕ್ತಿ ನಿಲ್ಲುತ್ತದೆಯೋ ಅವಾಗ ಆ ವ್ಯಕ್ತಿಯ ನಿಜವಾದ ಸಾವು ಎಂದು ಅಭಿಪ್ರಾಯ ಪಟ್ಟರು. ನನಗೆ ವಿನೋಬಾ ಎಂದರೆ ಮೊದಲು ನೆನಪಿಗೆ ಬರುವುದು ಅವರ ಸರ್ವೋದಯ ತತ್ವ ಮತ್ತು ಭೂದಾನ ಚಳುವಳಿ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿ ಎಂ ಗಣಾಚಾರಿ, ಪ್ರಾಚಾರ್ಯರು ಸರಕಾರಿ ಪದವಿ ಪೂರ್ವ ಕಾಲೇಜು ಚನ್ನಮ್ಮನ ಕಿತ್ತೂರು ಅವರು, ಶ್ರದ್ದೆ ಮತ್ತು ನಿರಂತರ ಪರಿಶ್ರಮದಿಂದ ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಮತ್ತೆ ಮುಂದೊಂದು ದಿನ ಗಾಂಧೀಜಿ ಈ ಜಗತ್ತಿನಲ್ಲಿ ಬದುಕಿದ್ದರು ಎನ್ನುವ ಬಗ್ಗೆ ಸಂಶಯ ಪಟ್ಟರೂ ಆಶ್ಚರ್ಯವೇನಿಲ್ಲ ಎಂದು ಐನ್ಸ್ಟನ್ ಒಂದು ಕಡೆ ಹೇಳಿದ್ದನ್ನು ನೆನೆದು ಕಳವಳ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾದ ನಿವೃತ್ತ ಐಎಎಸ್ ಅಧಿಕಾರಿ ಬಿ ಎಫ್ ಪಾಟೀಲ್ ಮಾತನಾಡಿ, ಗಾಂಧೀಜಿ ಕಂಡ ಗ್ರಾಮೀಣ ಭಾರತ ಅಭಿವೃದ್ಧಿಗೆ ಶಮಿಸಬೇಕಾದದ್ದು ನಮ್ಮೆಲ್ಲರ ಹೊಣೆ ಎಂದು ಅಭಿಪ್ರಾಯ ಪಟ್ಟರು. ಕರ್ನಾಟಕ ಸರ್ವೋದಯ ಮಂಡಲದ ಅಧ್ಯಕ್ಷ ಎಲ್ ನರಸಿಂಹಯ್ಯ ಅವರು, ಗಾಂಧೀಜಿ ಒಬ್ಬ ವ್ಯಕ್ತಿ ಅಲ್ಲ, ಅವರು ಒಂದು ಚಿಂತನೆ ಎಂದು ಅಭಿಪ್ರಾಯ ಪಟ್ಟರು ಮತ್ತು ಆ ಚಿಂತನೆ ಇಂದಿಗೂ ಎಂದಿಗೂ ಪ್ರಸ್ತುತವಾಗಿರಲಿದೆ ಎಂದರು.
ಕರ್ನಾಟಕ ಸರ್ವೋದಯ ಮಂಡಲದ ಗೌರವ ಕಾರ್ಯದರ್ಶಿ ಡಾ. ಹೆಚ್ ಎಸ್ ಸುರೇಶ್ ಅವರು, ವಿದ್ಯಾರ್ಥಿಗಳಿಗೆ ಗಾಂಧೀಜಿ ಅವರ ಮೌಲ್ಯಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬೆಳಗಾವಿ ಜಿಲ್ಲಾ ಸರ್ವೋದಯ ಮಂಡಲದ ಅಧ್ಯಕ್ಷ ಮಹಾಂತೇಶ ಹೊಂಗಲ ಅವರು ನಾವುಗಳು ಆಸ್ತಿ ಅಂತಸ್ತಿನಿಂದ ಶ್ರೀಮಂತರಾಗದೆ ಒಳ್ಳೆಯ ಮೌಲ್ಯಗಳಿಂದ ಶ್ರೀಮಂತರಾಗಬೇಕು, ಇದಕ್ಕೆ ನಮಗೆ ಮಹಾತ್ಮಾ ಗಾಂಧೀಜಿ ಮತ್ತು ವಿನೋಬಾ ಜಿ ಅವರುಗಳ ಜೀವನ ನಿದರ್ಶನವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ವಿ ಟಿ ಹುಡೇದ, ಎಸ್ ಆರ್ ಸಿದ್ಧಾಂತಿ, ಸೋಮಪ್ಪ ಕಬ್ಬೂರ, ಎಸ್ ಎಸ್ ಹಟ್ಟಿಹೊಳಿ, ಎಂ ಎಸ್ ಗಿಡಮೂದಿ, ಬಸವರಾಜ ಆನಿಕಿವಿ, ಚನ್ನಬಸು ಹೊಂಗಲ, ಶ್ರೀಶೈಲ ಆನಿಕಿವಿ, ಶಿವಾನಂದ ಆನಿಕಿವಿ, ಕುಬೇರ ಹಣಬರ, ಚಿಕ್ಕಬೆಳ್ಳಿಕಟ್ಟಿ ಪ್ರೌಢ ಶಾಲೆ ಹಾಗೂ ಗೋವನಕೊಪ್ಪದ ಗುರುದೇವ ಆತ್ಮಾನಂದ ಪದವಿ ಪೂರ್ವ ಕಾಲೇಜಿನ ಗುರು ವೃಂದ ಮತ್ತು ವಿದ್ಯಾರ್ಥಿಗಳು, ಗುರುದೇವ ಆತ್ಮಾನಂದ ಸದ್ಭಕ್ತ ಮಂಡಳಿ ಗೋವನಕೊಪ್ಪ ಹಾಗೂ ಗೋವನಕೊಪ್ಪ-ಚಿಕ್ಕಬೆಳ್ಳಿಕಟ್ಟಿ ಗ್ರಾಮಸ್ಥರು, SCH ಪ್ರತಿಷ್ಠಾನದ ಸ್ವಯಂ ಸೇವಕರು ಹಾಜರಿದ್ದರು.
ಬಾ- ಬಾಪು ವರ್ಷಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳ ವಿಜಯಶಾಲಿಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನಗಳನ್ನು ವಿತರಿಸಲಾಯಿತು.
ಬೆಳಗಾವಿ ಜಿಲ್ಲಾ ಸರ್ವೋದಯ ಮಂಡಲದ ಕೋಶಾಧ್ಯಕ್ಷೆ ಸವಿತಾ ಮುತ್ನಾಳಿ ಅವರು ಕಾರ್ಯಕ್ರಮ ನಿರೂಪಿಸಿದರು, SCH ಪ್ರತಿಷ್ಠಾನದ ಸ್ವಯಂ ಸೇವಕಿ ಅಶ್ವಿನಿ ಆನಿಕಿವಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ