ಪ್ರಗತಿವಾಹಿನಿ ಸುದ್ದಿ, ಉಗರಗೋಳ(ತಾ.ಸವದತ್ತಿ)- ಇದೇ ೨೯ ರಿಂದ ನಡೆಯಲಿರುವ ನವರಾತ್ರಿ ಉತ್ಸವಕ್ಕೆ ಏಳುಕೊಳ್ಳದ ನಾಡು ಯಲ್ಲಮ್ಮನಗುಡ್ಡ ಸಜ್ಜಾಗಿದೆ. ನೆರೆ ನೋವಿನ ಮಧ್ಯೆಯೂ ಉತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಹಬ್ಬದ ಸಿದ್ದತೆಗಳು ಚುರುಕುಗೊಂಡಿವೆ.
ಕರ್ನಾಟಕ, ಮಹಾರಾಷ್ಟ್ರ, ಗೋವಾ, ತಮಿಳುನಾಡು, ಕೇರಳ ಮತ್ತು ಆದ್ರಪ್ರದೇಶ ರಾಜ್ಯಗಳಿಂದ ಆಗಮಿಸುವ ಲಕ್ಷಾಂತರ ಭಕ್ತರಿಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಯಲ್ಲಮ್ಮಾ ದೇವಸ್ಥಾನ ಹಾಗೂ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಜಿಲ್ಲಾ ಆಡಳಿತದ ಅಧಿಕಾರಿಗಳು ನಿರತರಾಗಿದ್ದಾರೆ.
ದೀಪಗಳ ಅಳವಡಿಕೆ ನವರಾತ್ರಿ ವೇಳೆ ಯಲ್ಲಮ್ಮ ದೇವಸ್ಥಾನದಲ್ಲಿರುವ ದೀಪಕ್ಕೆ ಎಣ್ಣೆ ಹಾಕಿದರೆ ತಮ್ಮ ಹಾಗೂ ತಮ್ಮ ಕುಟುಂಬದ ಬಾಳು ದೀಪದಂತೆ ಬೆಳಗುತ್ತಿರುತ್ತದೆ ಎಂಬುದು ಭಕ್ತರ ನಂಬಿಕೆ. ಗುಡ್ಡಕ್ಕೆ ಬರುವ ಪ್ರತಿಯೊಬ್ಬರೂ ದೀಪಕ್ಕೆ ಎಣ್ಣೆ ಹಾಕಿ ಭಕ್ತಿ ಸಮರ್ಥಿಸುತ್ತಾರೆ.
ಹಾಗಾಗಿ ಯಲ್ಲಮ್ಮ ದೇವಸ್ಥಾನದ ಗರ್ಭಗುಡಿ ಎದುರು, ಪ್ರಾಂಗಣ ಹಾಗೂ ಹೊರಗಡೆ ದೀಪಗಳನ್ನು ಅಳವಡಿಕೆ ಮಾಡಲಾಗಿದೆ. ಗುಡ್ಡದ ಅಂಗಡಿ -ಮುಂಗಟ್ಟುಗಳಲ್ಲಿ ಲಕ್ಷಾಂತರ ರೂಪಾಯಿಯ ಎಣ್ಣೆ ವ್ಯಾಪಾರ-ವಹಿವಾಟು ನಡೆಯುವ ಅಂದಾಜಿದೆ.
ಸೆ.೨೯ ರಂದು ಯಲ್ಲಮ್ಮಾ ದೇವಸ್ಥಾನದ ಗರ್ಭಗುಡಿ ಎದುರಿನ ದೀಪಕ್ಕೆ ಎಣ್ಣೆ ಹಾಕುವ ಮೂಲಕ ಘಟಸ್ಥಾಪನೆ ಮಾಡಲಾಗುತ್ತದೆ. ಪ್ರತಿದಿನ ಎಲ್ಲರ ಅಮ್ಮ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಅಭಿಷೇಕ, ಸೀರೆ ಅಲಂಕಾರ, ವಿಶೇಷವಾದ ಅಡುಗೆಯ ನೈವೇಧ್ಯವನ್ನು ತಯಾರಿಸಿ ಪಡ್ಡಲಗಿ ತುಂಬಿ ಭಕ್ತಿ ಸಲ್ಲಿಸುತ್ತಾರೆ. ಕೊನೆಯ ಎರಡು ದಿನಗಳಂದು ಆಯುಧ ಪೂಜೆ ಮತ್ತು ಬನ್ನಿ ಮುಡಿಯುವ ಮುಖಾಂತರವಾಗಿ ಉತ್ಸವ ಸಂಪನ್ನಗೊಳ್ಳಲಿದೆ.
ಶನಿವಾರವೇ ಭಕ್ತರ ದಂಡು
ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಭಾನುವಾರ ಸಂಜೆ ೬ ಕ್ಕೆ ಘಟಸ್ಥಾಪನಾ ಕಾರ್ಯಕ್ರಮ ನಡೆಯಲಿದೆ,
ನವರಾತ್ರಿ ಅಂಗವಾಗಿ ಶನಿವಾರ ಸಂಜೆಯಿಂದಲೇ ಗುಡ್ಡಕ್ಕೆ ಭಕ್ತರ ದಂಡು ಹರಿದು ಬರುತ್ತಲಿದೆ.
ಯಲ್ಲಮ್ಮನ ಗುಡ್ಡಕ್ಕೆ ಸಂಪರ್ಕ ಕಲ್ಪಸುವ ಉಗರಗೋಳ, ಜೋಗಳಬಾವಿ ಮತ್ತು ಸವದತ್ತಿ ಮಾರ್ಗಗಳಲ್ಲಿ ವಾಹನ ದಟ್ಟಣೆ, ಜನ ದಟ್ಟಣೆ, ಹೆಚ್ಚಿದೆ. ಭಾನುವಾರ ಬೆಳಿಗ್ಗೆ ವೇಳೆಗೆ ಯಲ್ಲಮ್ಮನಗುಡ್ಡ ಭಕ್ತರಿಂದ ತುಂಬಿ ತುಳಕಲಿದೆ. ಜನರ ನಿಯಂತ್ರಣಕ್ಕೆ ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಸಂಚಾರ ಸಮಸ್ಯೆ ಉದ್ಬವಿಸುವ ಕಡೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿದ್ದಾರೆ. ಬೇಕಾಬಿಟ್ಟಿ ವಾಹನ ನಿಲುಗಡೆ ಮಾಡಿದವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ದೇವಸ್ಥಾನದ ಆವರದಲ್ಲಿ ಯಲ್ಲಮ್ಮ ದೇವಿ ದರ್ಶನಕ್ಕೆ ಶನಿವಾರವೂ ಭಕ್ತರು ಸರದಿ ಸಾಲಿನಲ್ಲಿ ನಿಂತಿದ್ದು ಕಂಡುಬಂತು.
ನೆರೆ ನೋವಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರಲಿದ್ದಾರೆ ಎಂದು ನಿರೀಕ್ಷಿಸುತ್ತಿದ್ದೇವೆ. ಭಕ್ತರಿಗೆ ಶುದ್ದ ಕುಡಿಯುವ ನೀರು, ವಸತಿ ಸೌಲಭ್ಯ, ದರ್ಶನಕ್ಕೆ ಸಾಗಲು ನೆರಳಿನ ವ್ಯವಸ್ಥೆ ಒದಗಿಸಲು ಸಿದ್ದರಾಗಿದ್ದೇವೆ. ಸ್ವಚ್ಚತೆಗೆ ಹೆಚ್ಚಿನ ಮಹತ್ವ ನಿಡಿದ್ದು ಭಕ್ತರು ಸಹ ನಿಗದಿತ ಜಾಗದಲ್ಲಿ ಅಳವಡಿಸಿದ ದೀಪಗಳಲ್ಲೇ ಎಣ್ಣೆ ಹಾಕಬೇಕು. ದೇವಸ್ಥಾನದ ಜಾಗದಲ್ಲಿ ಬೇಕಾಬಿಟ್ಟಿಯಾಗಿ ಎಣ್ಣೆಯನ್ನು ಹಾಕಿ ಗಲೀಜುಗೊಳಿಸಬಾರದು.
-ರವಿ ಕೊಟಾರಗಸ್ತಿ,
ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ
ನವರಾತ್ರಿಯ ೧, ೫, ೭ ಹಾಗೂ ೯ ನೇ ದಿನಗಳಂದು ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಯಲ್ಲಮ್ಮನಗುಡ್ಡಕ್ಕೆ ತೆರಳುತ್ತಾರೆ. ಭಕ್ತರ ಸಂಖ್ಯೆ ಆಧರಿಸಿ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು.
-ಮಹಾದೇವ ಮುಂಜಿ,
ವಿಭಾಗಿಯ ನಿಯಂತ್ರಣಾಧಿಕಾರಿ ಸಾರಿಗೆ ಸಂಸ್ಥೆ ಬೆಳಗಾವಿ.
——————————–
ನವರಾತ್ರಿ ಉತ್ಸವದಲ್ಲಿ ಸುರಕ್ಷತೆ ಮತ್ತು ಭದ್ರತೆಗೆ ಒತ್ತು ನಿಡಲಾಗುವುದು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು-ಸವದತ್ತಿ ಸಿಪಿಆಯ್ ಸರವಗೋಳ,
ಪಿಎಸ್‌ಆಯ್ ಪರಶುರಾಮ ಪೂಜೇರ.
ಇದನ್ನೂ ಓದಿ –
ಸಾವಳಗಿಯ ಸಿದ್ಧ ಸಂಸ್ಥಾನಮಠದಲ್ಲಿ ದಸರಾ ಉತ್ಸವ
ಚಿಂಚಲಿಯ ಮಾಯಕ್ಕಾ ದೇವಿಯ ದೇವಸ್ಥಾನದಲ್ಲಿ ಸಂಭ್ರಮದ ನವರಾತ್ರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ