*ಹಿರಿಯ ನಾಗರಿಕರ ಹಕ್ಕುಗಳಿಗಾಗಿ ಮಾ.24ರಂದು ರಾಜ್ಯಮಟ್ಟದ ಬೃಹತ್ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ: ಹಿರಿಯ ನಾಗರಿಕರ ಹಕ್ಕುಗಳ ರಕ್ಷಣೆಗೆ ದೇಶವ್ಯಾಪಿ ಏಕರೂಪ ವೃದ್ಧಾಪ್ಯ ವೇತನ ಹಾಗೂ ವಿವಿಧ ಸೌಲಭ್ಯಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿ, ಮಾರ್ಚ್ 24ರಂದು ಹುಬ್ಬಳ್ಳಿ ನೆಹರು ಮೈದಾನದಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಕರ್ನಾಟಕ ಸ್ಟೇಟ್ ಸೀನಿಯರ್ ಸಿಟಿಜನ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಎ.ವೈ. ಬೆಂಡಿಗೇರಿ ತಿಳಿಸಿದರು.
ಮಂಗಳವಾರ ಬೆಳಗಾವಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಸುಮಾರು 20 ಕೋಟಿ ಹಾಗೂ ರಾಜ್ಯದ 80 ಲಕ್ಷ ಹಿರಿಯ ನಾಗರಿಕರನ್ನು “ರಾಷ್ಟ್ರದ ಸಂಪತ್ತು” ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.
ಹಿರಿಯ ನಾಗರಿಕರಿಗಾಗಿ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ, ಅವರಿಗೆ ಪ್ರತ್ಯೇಕ ಬಜೆಟ್ ಮೀಸಲಿಡಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯದ ಎಲ್ಲಾ ಬಿಪಿಎಲ್ ವರ್ಗದ ಹಿರಿಯ ನಾಗರಿಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ತಲಾ ₹5,000ರಂತೆ ಮಾಸಿಕ ವೃದ್ಧಾಪ್ಯ ವೇತನ ನೀಡಬೇಕು ಎಂದು ಹೇಳಿದರು.
ಇದೇ ವೇಳೆ, ಮಹಿಳಾ ಹಿರಿಯ ನಾಗರಿಕರಿಗೆ ನೀಡಲಾಗುತ್ತಿರುವ ಉಚಿತ ಬಸ್ ಪ್ರಯಾಣ ಸೇರಿದಂತೆ ಇತರ ಸೌಲಭ್ಯಗಳನ್ನು ಪುರುಷ ಹಿರಿಯ ನಾಗರಿಕರಿಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ನಿವೃತ್ತ ಸರ್ಕಾರಿ ನೌಕರರಿಗೆ ಸಂಬಂಧಿಸಿದ 7ನೇ ವೇತನ ಆಯೋಗದ ಎರಡನೇ ಹಂತದ ಶಿಫಾರಸುಗಳು ಹಾಗೂ ಕಮ್ಯೂಟೇಶನ್ ಹಣ ಪಾವತಿ ಕುರಿತ ಸುಪ್ರೀಂ ಕೋರ್ಟ್ ಆದೇಶವನ್ನು ತಕ್ಷಣ ಜಾರಿಗೆ ತರಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಎಂ.ವಿ. ಹಿರೇಮಠ, ಎಂ.ವಿ. ಮುದಕವಿ, ಎಸ್.ಜಿ. ಸಿದ್ನಾಳ, ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಕುಮಾರಸ್ವಾಮಿ ಬಡಾವಣೆ ಅಧ್ಯಕ್ಷ ವೀರುಪಾಕ್ಷಯ್ಯ ನೀರಲಗಿಮಠ, ಸುಶೀಲಾ ರಾಜಪೂತ್, ಸಿ.ಬಿ. ಸಂಗೊಳ್ಳಿ, ಶೇಖರ ಬೋಸಲೆ, ಬಿ.ಎಚ್. ವಿನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು.


