Election NewsPolitics

*ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಗೆಲುವು ಶತಸಿದ್ಧ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿಕೆ*

ಪ್ರಗತಿವಾಹಿನಿ ಸುದ್ದಿ: ದಿನದಿಂದ ದಿನಕ್ಕೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪರ ಅಲೆ ಬೀಸುತ್ತಿದ್ದು, ಉಪ ಚುನಾವಣೆಯಲ್ಲಿ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಗೆಲುವು ಶತಸಿದ್ಧ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಭವಿಷ್ಯ ನುಡಿದಿದ್ದಾರೆ.

ಶಿಗ್ಗಾವಿ ಪಟ್ಟಣದಲ್ಲಿ ರೋಡ್ ಶೋನಲ್ಲಿ ಪಾಲ್ಗೊಂಡು ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಪರ ಪ್ರಚಾರ ನಡೆಸಿದ ಸಚಿವರು, ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಗೆಲ್ಲುವುದು ಗ್ಯಾರಂಟಿ ಎಂದರು.‌

ಭಾರತೀಯರು ಸ್ವಾಭಿಮಾನಿಗಳು, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್, ಬಸವನ ಧರ್ಮ, ಸಂತ ಶಿಶುನಾಳ ಶರೀಫ, ಕನಕದಾಸರ ಧರ್ಮವೇ ಕಾಂಗ್ರೆಸ್ ಪಕ್ಷದ ಧರ್ಮ. ಜನರು ಜೀವನದಲ್ಲಿ ಅನ್ಯೋನ್ಯತೆಯಿಂದ ಇರಲು ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಹೇಳಿದರು. ‌

ಕಾಂಗ್ರೆಸ್ ಸರ್ಕಾರದ ಯೋಜನೆಗಳ ಬಗ್ಗೆ ಬಿಜೆಪಿಯವರು ಹಸಿ ಹಸಿ ಸುಳ್ಳು ಹಬ್ಬಿಸುತ್ತಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನರ ಬಾಳಲ್ಲಿ ನೆಮ್ಮದಿ ತಂದಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿಯವರು ಸುಳ್ಳು ಹೇಳುತ್ತಿದ್ದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ನಾವು ಘೋಷಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದೆವು ಎಂದು ಸಚಿವರು ಬಿಜೆಪಿ‌ ವಿರುದ್ಧ ಟೀಕಾಪ್ರಹಾರ ನಡೆಸಿದರು.

Home add -Advt

ಕರ್ನಾಟಕದಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಬಿಜೆಪಿಯವರು, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಪ್ರಣಾಳಿಕೆಯನ್ನು ಕಾಪಿ ಮಾಡಿದೆ ಎಂದು ಸಚಿವರು ಹೇಳಿದರು.

ನಮ್ಮ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಇನ್ನು ಯುವಕರಿದ್ದು, ಸಾಮಾನ್ಯ ಕುಟಂಬದ ಯುವಕನಿಗೆ ಶಿಗ್ಗಾವಿ ಜನರು ಒಂದು ಅವಕಾಶ ಮಾಡಿಕೊಡಬೇಕು. ಹಾವೇರಿ ಜಿಲ್ಲೆಯಿಂದ ಐದು ಜನ ಕಾಂಗ್ರೆಸ್ ಶಾಸಕರಿದ್ದು, ಪಠಾಣ್ ಗೆದ್ದರೆ, ಹಾವೇರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನೆರವಾಗಲಿದೆ. ನಾನು ಸಾಮಾನ್ಯ ಕಾರ್ಯಕರ್ತೆಯಾಗಿ ಪಠಾಣ್ ಪರ ಕೆಲಸ ಮಾಡುವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಚನ್ನಮ್ಮ ಸರ್ಕಲ್ ನಿಂದ ಮಾರ್ಕೆಟ್ ರೋಡ್ ಮೂಲಕ ಹಳೇ ಬಸ್ ನಿಲ್ದಾಣ ರವರೆಗೆ ರೋಡ್ ಶೋ ನಡೆಸಲಾಯಿತು.

ಈ ವೇಳೆ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಶಿವಾನಂದ ಪಾಟೀಲ್, ಮಂಕಾಳ್ ವೈದ್ಯ, ಈಶ್ವರ್ ಖಂಡ್ರೆ, ಶಾಸಕಿ ನಯನ ಮೋಟಮ್ಮ, ನಟ ಸಾಧು ಕೋಕಿಲ, ಮುಖಂಡರಾದ ಅಜಂಪೀರ್ ಖಾದ್ರಿ, ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ‌ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button