ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯ ಉಣ್ಣೆ ನಿಗಮದ ಅಧ್ಯಕ್ಷ ಕೃಷ್ಣ ಅನಿಗೊಳ್ಕರ್, ಬೀರಾ ಆನಿಗೇಳ್ಕರ್ ಸೇರಿದಂತೆ ನೂರಾರು ಮುಖಂಡರು ಶುಕ್ರವಾರ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ.
ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ನೇತೃತ್ವದಲ್ಲಿ ಹಲವಾರು ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಸೇರಿದರು. ರಾಜ್ಯ ಉಣ್ಣೆ ನಿಗಮದ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೃಷ್ಣ ಆನಿಗೋಳ್ಕರ್, ಬೀರಾ ಆನಿಗೋಳ್ಕರ್ ಹಾಗೂ ಶಿಂದೋಳ್ಳಿ ಗ್ರಾಮದ ಸುತ್ತಮುತ್ತಲಿನ ಅನೇಕ ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷದ ತತ್ವ, ಸಿದ್ದಾಂತಗಳನ್ನು ಒಪ್ಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಗ್ರಾಮ ಪಂಚಾಯಿತಿ ಸದಸ್ಯರಾದ ವಿಠ್ಠಲ ಸಾಂಬ್ರೇಕರ್, ರಮೇಶ ಸಾಂಬ್ರೇಕರ್, ಮುಖಂಡರಾದ ರಾಘವೇಂದ್ರ ಕೋಲ್ಕಾರ, ಬಾಗು ಕರೆಗಾರ, ವಿಠ್ಠಲ ಬೆಳಗಾಂವ್ಕರ್, ಭರಮಾ ಬೆಳಗಾಂವ್ಕರ್, ಮಹಾಂತೇಶ ಕೆಂಗೇರಿ, ರಮೇಶ ಆನಿಗೋಳ್ಕರ್, ಬಾಗಪ್ಪ ಆನಿಗೋಳ್ಕರ್, ಬಸವರಾಜ ಅಗಸಿಮನಿ ಮೊದಲಾದವರು ಕಾಂಗ್ರೆಸ್ ಸೇರಿದರು.
ಈ ವೇಳೆ ಮಾತನಾಡಿದ ಸತೀಶ್ ಜಾರಕಿಹೊಳಿ, ರಾಜ್ಯಾದ್ಯಂತ ವಿವಿಧ ಪಕ್ಷಗಳಿಂದ ಬಹಳಷ್ಟು ಜನರು ಕಾಂಗ್ರೆಸ್ ಸೇರುತ್ತಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಕನಿಷ್ಠ 12 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ತಿಳಿಸಿದರು.
ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅವರ ಗೆಲುವು ಖಚಿತವಾಗಿದ್ದು, ಕಳೆದಬಾರಿಗಿಂತ ಎಷ್ಟು ಅಂತರ ಹೆಚ್ಚಲಿದೆ ಎನ್ನುವುದಷ್ಟೇ ಗೊತ್ತಾಗಬೇಕಿದೆ ಎಂದು ಅವರು ಹೇಳಿದರು.
ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಬೆಳಗಾವಿ ಗ್ರಾಮೀಣ ಕ್ಷೇತ್ರ ಸೇರಿದಂತೆ ಜಿಲ್ಲೆಯ ಅನೇಕ ಕ್ಷೇತ್ರಗಳಲ್ಲಿ ಹಲವಾರು ಮುಖಂಡರು ಕಾಂಗ್ರೆಸ್ ಸೇರುತ್ತಿದ್ದಾರೆ. ಪಕ್ಷ ದೊಡ್ಡ ಮಟ್ಟದಲ್ಲಿ ಬಲಗೊಳ್ಳುತ್ತಿದ್ದು, ಕಾಂಗ್ರೆಸ್ ನಿರೀಕ್ಷೆಗೂ ಮೀರಿ ಜಯಭೇರಿ ಭಾರಿಸಲಿದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ