ರಸ್ತೆಗುಂಡಿ ಮುಚ್ಚಲು ತ್ವರಿತ ಕ್ರಮ
ಪ್ರಗತಿವಾಹಿನಿ ಸುದ್ದಿ: ಮಳೆಯಿಂದ ಪ್ರವಾಹ ಪರಿಸ್ಥಿತಿ ಎದುರಿಸುವ ಸ್ಥಳಗಳು, ರಾಜಕಾಲುವೆ ಹೂಳು ತೆಗೆಯುತ್ತಿರುವ ಹಾಗೂ ಮೆಟ್ರೋ ಡಬಲ್ ಡೆಕ್ಕರ್ ಕಾಮಗಾರಿ ಸೇರಿದಂತೆ ವಿವಿಧ ಸ್ಥಳಗಳನ್ನು ಸಿಎಂ ಸಿದ್ದರಾಮಯ್ಯ ಅವರ ಜೊತೆಗೂಡಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪರಿಶೀಲನೆ ನಡೆಸಿದರು.
ಮಳೆಗಾಲ ಆರಂಭಕ್ಕೂ ಮುನ್ನ ಸಿಎಂ ಹಾಗೂ ಡಿಸಿಎಂ ನಗರ ಪ್ರದಕ್ಷಿಣೆ ಮಾಡಿ, ಮಳೆ ನೀರು ಸರಾಗವಾಗಿ ಹರಿದು ಹೋಗಲು ಬಿಬಿಎಂಪಿಯಿಂದ ಕೈಗೊಂಡಿರುವ ಮುಂಜಾಗ್ರತ ಕ್ರಮಗಳನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.
ಉಭಯ ನಾಯಕರು ಬುಧವಾರ ಬೆಳಿಗ್ಗೆ ಸಿಎಂ ನಿವಾಸ ಕೃಷ್ಣದಿಂದ ಹೊರಟು ವಿಜಯನಗರ ವಿಧಾನಸಭಾ ಕ್ಷೇತ್ರದ ಗಾಳಿ ಆಂಜನೇಯ ದೇವಸ್ಥಾನ ಬಳಿಯ ರಾಜಕಾಲುವೆಯನ್ನು ವೀಕ್ಷಣೆ ಮಾಡಿ ಸಾರ್ವಜನಿಕರು ಕಸ ಎಸೆಯದಂತೆ ಮುಂಚಿತವಾಗಿಯೇ ವ್ಯವಸ್ಥೆ ಮಾಡಬಹುದಾಗಿತ್ತಲ್ಲವೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಜತೆಗೆ ಕೂಡಲೇ ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಮುಖ್ಯಇಂಜಿನಿಯರ್ ಅವರಿಗೆ ಡಿಸಿಎಂ ಸೂಚನೆ ನೀಡಿದರು.
“ಬ್ರಾಂಡ್ ಬೆಂಗಳೂರು ಯೋಜನೆ ಮೂಲಕ ಬೆಂಗಳೂರಿನ ಘನತೆಯನ್ನು ಮತ್ತೆ ಮರಳಿ ತರಲು ನಮ್ಮ ಸರ್ಕಾರ ಹೊರಟಿದೆ. ಯಾವುದೇ ಕಾರಣಕ್ಕೂ ಮಳೆ ನೀರಿನ ಕೃತಕ ಪ್ರವಾಹ, ಮನೆಗಳಿಗೆ ನೀರು ನುಗ್ಗುವುದು ಸೇರಿದಂತೆ ಯಾವ ತೊಂದರೆಗಳು ಆಗಬಾರದು” ಎಂದು ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ತಿಳಿಸಿದರು.
ನಂತರ ಬಿಟಿಎಂ ಮೆಟ್ರೋ ನಿಲ್ದಾಣದ ಬಳಿ ನಿರ್ಮಾಣ ಹಂತದಲ್ಲಿ ಇರುವ ಡಬಲ್ ಡೆಕ್ಕರ್ ರಸ್ತೆ ಮೇಲೆ ಸಿಎಂ ಜೊತೆ ಒಂದು ಸುತ್ತು ಸಂಚರಿಸಿ ಕಾಮಗಾರಿಯ ಗುಣಮಟ್ಟ ಪರಿಶೀಲಿಸಿದರು. ಸಂಚಾರ ದಟ್ಟಣೆ ನಿವಾರಣೆಗೆ ಈ ಯೋಜನೆ ಸಹಕಾರಿಯಾಗಲಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ನಿರ್ದೇಶಿಸಿದರು.
ಮಳೆ ಬಂದಾಗ ಮನೆಗಳಿಗೆ ನೀರು ನುಗ್ಗಿ ಅವಾಂತರ ಉಂಟಾಗುತ್ತಿದ್ದ ಬಿಳೆಕಾಹಳ್ಳಿ, ಕೋಡಿ ಚಿಕ್ಕನಹಳ್ಳಿ ರಸ್ತೆಯ ಅನುಗ್ರಹ ಲೇಔಟ್ ಗೆ ಭೇಟಿ ನೀಡಿ. ಈ ತೊಂದರೆ ನಿವಾರಣೆಗೆ ಮಳೆ ನೀರನ್ನು ಪಂಪ್ ಮಾಡುವ ಜಾಕ್ವೆಲ್ ಅಳವಡಿಸಿರುವ ಕಾಮಗಾರಿಯನ್ನು ಕೂಲಂಕುಷವಾಗಿ ವೀಕ್ಷಿಸಿದರು.
ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಮಳೆ ನೀರಿನಿಂದ ಉಂಟಾಗುವ ತೊಂದರೆಗಳ ಬಗ್ಗೆ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಹಾಗೂ ಅನುಗ್ರಹ ಲೇಔಟ್ ನಾಗರಿಕರು ಡಿಸಿಎಂ ಗಮನ ಸೆಳೆದರು. ಆಗ ಉಪಮುಖ್ಯಮಂತ್ರಿಗಳು ಸ್ಥಳದಲ್ಲೇ ಇದ್ದ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.
ಸಿಲ್ಕ್ ಬೋರ್ಡ್ ಜಂಕ್ಷನ್ ಮೆಟ್ರೋ ಕಾಮಗಾರಿ ಬಳಿ, ಮೆಟ್ರೋದವರು ಮಳೆ ನೀರಿನ ಚರಂಡಿಯನ್ನು ಚಿಕ್ಕದು ಮಾಡಿರುವ ಕಾರಣಕ್ಕೆ ಉಂಟಾಗಿರುವ ತೊಂದರೆ ಬಗ್ಗೆ ಸಾರ್ವಜನಿಕರು ಡಿಸಿಎಂ ಗಮನಕ್ಕೆ ತಂದರು. ಈ ಸಮಸ್ಯೆ ನಿವಾರಣೆಗೆ ಕೂಡಲೇ ಪರ್ಯಾಯ ವ್ಯವಸ್ಥೆ ರೂಪಿಸುವಂತೆ ಡಿಸಿಎಂ ಅಧಿಕಾರಿಗಳಿಗೆ ತಿಳಿಸಿದರು.
ಮಾಧ್ಯಮ ಪ್ರತಿಕ್ರಿಯೆ:
ನಗರ ಪ್ರದಕ್ಷಿಣೆ ವೇಳೆ ಹಾಗೂ ನಂತರ ಸಿಎಂ ನಿವಾಸದಲ್ಲಿ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.
ಖಾಸಗಿ ಬಡಾವಣೆಗಳ ಸಮಸ್ಯೆ ನಿವಾರಣೆಗೆ ಡೆವಲಪ್ಪರ್ ಗಳಿಗೆ ಸೂಚನೆ:
ನಗರ ಪ್ರದಕ್ಷಣೆ ಬಗ್ಗೆ ಮಾಧ್ಯಮಗಳು ಮಾಹಿತಿ ಕೇಳಿದಾಗ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು, “ಕಳೆದ ವರ್ಷ ನಮ್ಮ ರಾಜ್ಯ ಭೀಕರ ಬರಗಾಲವನ್ನು ಎದುರಿಸಿದ್ದು, ಈ ವರ್ಷ ಉತ್ತಮ ಮಳೆಯ ನಿರೀಕ್ಷೆ ಇದೆ. ಹೀಗಾಗಿ ಮಳೆ ಬರುವ ಮುನ್ನ ಪೂರ್ವಭಾವಿ ಸಿದ್ಧತೆ ಪರಿಶೀಲಿಸುತ್ತಿದ್ದೇವೆ. ಮಳೆಯಿಂದ ಸಮಸ್ಯೆಗೆ ತುತ್ತಾಗುವ ಪ್ರದೇಶಗಳನ್ನು ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿದ್ದು, ಎಲ್ಲಾ ಚರಂಡಿಗಳು ಹಾಗೂ ಮಳೆನೀರುಗಾಲುವೆಗಳನ್ನು ಸ್ವಚ್ಛಗೊಳಿಸಲಾಗುವುದು. ಆಮೂಲಕ ಸರಾಗವಾಗಿ ನೀರು ಹರಿಯುವಂತೆ ನೋಡಿಕೊಳ್ಳಲಾಗುವುದು”ಎಂದರು.
“ಇನ್ನು ಸರಿಯಾದ ಯೋಜನೆ, ಮೂಲಸೌಕರ್ಯ ವ್ಯವಸ್ಥೆ ಇಲ್ಲದೇ ಬಡಾವಣೆ ನಿರ್ಮಾಣ ಮಾಡಿರುವ ಖಾಸಗಿ ಡೆವಲಪ್ಪರ್ ಗಳಿಗೆ ನೋಟೀಸ್ ನೀಡುತ್ತೇವೆ. ಖಾಸಗಿ ಬಡಾವಣೆಗಳಲ್ಲಿ ಚರಂಡಿ ಹಾಗೂ ಕಾಲುವೆ ಕಾಮಗಾರಿಗಳನ್ನು ಅಪೂರ್ಣಗೊಳಿಸಿರುವ ಗುತ್ತಿಗೆದಾರರು ಹಾಗೂ ಡೆವಲಪ್ಪರ್ ಗಳು ಕೂಡಲೆ ಜವಾಬ್ದಾರಿ ತೆಗೆದುಕೊಂಡು ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡುತ್ತೇವೆ” ಎಂದು ತಿಳಿಸಿದರು.
ಒತ್ತುವರಿ ತೆರವಿಗೆ ಪರಿಹಾರ ನೀಡುವುದಿಲ್ಲ:
ಜಂಟಿ ಮಾಧ್ಯಮಗೋಷ್ಠಿ ವೇಳೆ, ರಾಜಕಾಲುವೆ ತೆರವಿಗೆ 1800 ಕೋಟಿ ಹಣ ಮೀಸಲಿಟ್ಟಿರುವುದು ಪರಿಹಾರ ನೀಡುವುದಕ್ಕಾ ಎಂದು ಕೇಳಿದಾಗ ಅವರು ಉತ್ತರಿಸಿದ್ದು ಹೀಗೆ:
“ಒತ್ತುವರಿ ಮಾಡಿದವರಿಗೆ ಸರ್ಕಾರ ಯಾವುದೇ ಪರಿಹಾರ ನೀಡುವುದಿಲ್ಲ. ರಾಜಕಾಲುವೆ ಒತ್ತುವರಿ ತೆರವು, ರಾಜಕಾಲುವೆ ಸ್ವಚ್ಛತೆ, ಮಳೆನೀರುಗಾಲುವೆ ನಿರ್ಮಾಣಕ್ಕೆ ಈ ಅನುದಾನ ಮೀಸಲಿಡಲಾಗಿದೆ. ಖಾಸಗಿ ಬಡವಾಣೆಗಳಲ್ಲಿ ಉದ್ಭವಿಸಿರುವ ಮೂಲ ಸೌಕರ್ಯಗಳ ಕೊರತೆಗಳನ್ನು ಆಯಾ ಬಡವಾಣೆ ಅಭಿವೃದ್ದಿ ಮಾಡಿರುವ ಖಾಸಗಿ ಡೆವಲಪರ್ ಗಳು ಸರಿಪಡಿಸಬೇಕು ಎಂದು ಸೂಚಿಸಿದ್ದೇವೆ. ಕೆಲವು ಕಡೆ ಪಾಲಿಕೆಯವರೂ ಸಮಸ್ಯೆ ಬಗೆಹರಿಸಿದ್ದಾರೆ. ಬೆಂಗಳೂರಿನಲ್ಲಿ ಮಳೆ ಬಂದಾಗ ಮುಂಜಾಗ್ರತ ಕ್ರಮದ ಬಗ್ಗೆ ಈಗಾಗಲೇ ನಾನು ಒಂದು ಸುತ್ತಿನ ಪರಿಶೀಲನೆ ಮಾಡಿದ್ದೆ. ಇಂದು ಮುಖ್ಯಮಂತ್ರಿಗಳು ಕೂಡ ಪರಿಶೀಲನೆ ಮಾಡಿ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಿದ್ದಾರೆ” ಎಂದರು.
ರಸ್ತೆಗುಂಡಿ ಮುಚ್ಚಲು ತ್ವರಿತ ಕ್ರಮ:
ರಸ್ತೆಗಳ ಗುಂಡಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, “ರಸ್ತೆ ಗುಂಡಿಗಳ ಫೋಟೋಗಳನ್ನು ಸಾರ್ವಜನಿಕರು ತೆಗೆದು ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರುವ ವ್ಯವಸ್ಥೆ ಕಲ್ಪಿಸಿದ್ದೇವೆ. ಟ್ರಾಫಿಕ್ ಪೊಲೀಸರು ಕೂಡ ರಸ್ತೆ ಗುಂಡಿ ಗುರುತಿಸಲು ಅವಕಾಶ ಕಲ್ಪಿಸಲಾಗಿದೆ. ತ್ವರಿತವಾಗಿ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ