*ಸೂಸೈಡ್ ಪ್ರಕರಣ: ಸಮಾಜ ಒಟ್ಟಿಗೆ ಬದುಕಲು ಬಿಡುವುದಿಲ್ಲ ಎಂದು ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಯಲಹಂಕದಲ್ಲಿ ನೇಪಾಳ ಮೂಲದ ಇಬ್ಬರು ಯುವತಿಯರು ಒಂದೇ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸಿದ್ದು, ಪ್ರಾಥಮಿಕ ವಿಚಾರಣೆಯ ಪ್ರಕಾರ, ಇಬ್ಬರೂ ಯುವತಿಯರು ಪರಸ್ಪರ ಪ್ರೀತಿಸುತ್ತಿದ್ದು, ಕುಟುಂಬ ಹಾಗೂ ಸಮಾಜದ ವಿರೋಧದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಮೃತರನ್ನು 22 ವರ್ಷದ ಸಿರ್ಜನಾ ಹಾಗೂ 23 ವರ್ಷದ ರಿತಾ ಎಂದು ಗುರುತಿಸಲಾಗಿದೆ. ಇಬ್ಬರೂ ಸಂಬಂಧಿಕರಾಗಿದ್ದು, ಮೂಲತಃ ನೇಪಾಳದವರು ಎನ್ನಲಾಗಿದೆ. ಬಾಲ್ಯದಿಂದಲೇ ಒಟ್ಟಿಗೆ ಬೆಳೆದಿದ್ದ ಇವರ ನಡುವೆ ಆತ್ಮೀಯ ಬಾಂಧವ್ಯ ಇತ್ತು. ಒಂದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ ಇಬ್ಬರೂ ಬಹುತೇಕ ಎಲ್ಲ ಸಮಯದಲ್ಲೂ ಜೊತೆಯಾಗಿ ಇರುತ್ತಿದ್ದರು ಎಂದು ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನೇಪಾಳದಲ್ಲಿದ್ದಾಗಲೇ ಇಬ್ಬರ ಆತ್ಮೀಯತೆ ಬಗ್ಗೆ ಸ್ಥಳೀಯರು ಟೀಕೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸಂಬಂಧಿಕರು ಅವರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು. ಆದರೆ ನಗರಕ್ಕೆ ಬಂದ ಬಳಿಕವೂ ಇಬ್ಬರೂ ಸಂಪರ್ಕದಲ್ಲೇ ಇದ್ದರು. ರಿತಾ ಪ್ರೇಜರ್ ಟೌನ್ನಲ್ಲಿ ಹಾಗೂ ಸಿರ್ಜನಾ ಜಕ್ಕೂರಿನಲ್ಲಿ ವಾಸವಾಗಿದ್ದರೂ ವಾರದಲ್ಲಿ ಹಲವು ಬಾರಿ ಭೇಟಿಯಾಗುತ್ತಿದ್ದರು ಎಂದು ತಿಳಿದುಬಂದಿದೆ.
ಘಟನೆಗೆ ಮುನ್ನದ ದಿನ ಇಬ್ಬರೂ ಸಂಬಂಧಿಕರ ಮನೆಗೆ ಊಟಕ್ಕೆ ಹೋಗಿದ್ದರು. ಈ ವೇಳೆ ಕುಟುಂಬದಲ್ಲಿ ಮದುವೆ ವಿಚಾರ ಪ್ರಸ್ತಾಪವಾಗಿದ್ದು, ಅದರ ನಂತರ ಇಬ್ಬರೂ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
“ನಮ್ಮಿಬ್ಬರನ್ನು ಸಮಾಜ ಒಟ್ಟಿಗೆ ಬದುಕಲು ಬಿಡುವುದಿಲ್ಲ” ಎಂದು ಮಾತನಾಡಿಕೊಂಡಿದ್ದರೆಂಬ ಮಾಹಿತಿ ವಿಚಾರಣೆ ವೇಳೆ ಪೊಲೀಸರಿಗೆ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಆತ್ಮಹತ್ಯೆ ಮಾಡುವ ನಿರ್ಧಾರಕ್ಕೆ ಬಂದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.




