ಪ್ರಗತಿವಾಹಿನಿ ಸುದ್ದಿ; ಶಿರಸಿ: 2021ನೇ ಸಾಲಿನ ಕೇಂದ್ರ ಬಜೆಟ್ ಐತಿಹಾಸಿಕ ಬಜೆಟ್, ಕೃಷಿ ಉತ್ಪಾದನೆ ಪ್ರಮಾಣ ಹೆಚ್ಚಳ, ಮೂಲಸೌಕರ್ಯ ಹೆಚ್ಚಳ, ಆರೋಗ್ಯ ಕ್ಷೇತ್ರದಲ್ಲಿ ಸೌಕರ್ಯ ವೃದ್ಧಿಗೆ ಇದು ಪೂರಕವಾಗಿದೆ ಎಂದು ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಹಣಕಾಸು ನಿಧಿಯೂ ( ಐಎಂಎಫ್ ) ಭಾರತವು ಅತಿ ವೇಗದಿಂದ ಅಭಿವೃದ್ಧಿ ಸಾಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದೆ. ಇದೇ ಕಾರಣಕ್ಕೆ ನಾವು ಮೂಲಸೌಕರ್ಯಕ್ಕೆ ಗರಿಷ್ಠ ಒತ್ತನ್ನು ನೀಡಿದ್ದೇವೆ. ಕೃಷಿ ಮೂಲಸೌಕರ್ಯಕ್ಕೆ 1 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಲಾಗುವುದು , ವಿವಿಧ ಕ್ಷೇತ್ರಗಳ ಮೂಲಸೌಕರ್ಯ ಅಭಿವೃದ್ಧಿಗೆ ಮುಂದಿನ 5 ವರ್ಷಗಳಲ್ಲಿ 100 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಲಾಗುವುದು ಎಂದರು.
ಇನ್ನು ಭಾರತ ಜಗತ್ತಿನ ಆರೋಗ್ಯದ ಕೇಂದ್ರವಾಗುವತ್ತ ಮುನ್ನಡೆಯಲಿದೆ. ಕಳೆದ ಸಾಲಿನ 94 ಸಾವಿರ ಕೋಟಿ ರೂ ಬದಲು ಈ ಬಾರಿ ಈ ಕ್ಷೇತ್ರದ ಹೂಡಿಕೆಯನ್ನು 2.23,000 ಕೋಟಿಗೆ ಏರಿಸಲಾಗಿದೆ, ಇದರಿಂದ ಬೃಹತ್ ಆರೋಗ್ಯ ಮೂಲಸೌಕರ್ಯ ಕೇಂದ್ರವಾಗಿ ಭಾರತವು ಬೆಳೆಯಲಿದೆ. 2021-22ನೇ ಸಾಲಿನ ಕೇಂದ್ರ ಬಜೆಟ್‌ನಡಿ ಕೇಂದ್ರ ಸರಕಾರವು 34,83,236 ಕೋಟಿ ರೂಪಾಯಿಗಳನ್ನು ವಿವಿಧ ಕ್ಷೇತ್ರಗಳಡಿ ವ್ಯಯಿಸಲು ಉದ್ದೇಶಿಸಿದೆ. ವಿತ್ತೀಯ ಕೊರತೆ ಕಳೆದ ಬಾರಿ ಶೇಕಡ 4.6 ರಷ್ಟಿದ್ದುದು ಈ ಬಾರಿ ಶೇಕಡ 6.8 ರಷ್ಟು ಇದ್ದರೂ, ಮೂಲಭೂತ ಸೌಕರ್ಯಕ್ಕೆ ಹೆಚ್ಚು ಬಂಡವಾಳ ಹೂಡುವ ಕಾರಣ ಸರಕು ಸೇವಾ ಕ್ಷೇತ್ರ, ಆರೋಗ್ಯ ಸೇರಿದಂತೆ ವಿವಿಧ ರಂಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯರಾದ ಶಾಂತಾರಾಮ ಸಿದ್ದಿ, ಜಿಲ್ಲಾಧ್ಯಕ್ಷರಾದ ವೆಂಕಟೇಶ ನಾಯಕ, ಮಾಜಿ ಶಾಸಕರಾದ ಸುನೀಲ್ ಹೆಗಡೆ,ಜಿಲ್ಲಾ ಮಾಧ್ಯಮ ವಕ್ತಾರರಾದ ನಾಗರಾಜ ನಾಯಕ ಹಾಗೂ ಪಕ್ಷದ ಜಿಲ್ಲಾ ಸ್ತರದ ಪದಾಧಿಕಾರಿಗಳು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ