Kannada NewsLatestNationalPolitics

*ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಸೋನಮ್ ವಾಂಗ್ಟುಕ್*

ಪ್ರಗತಿವಾಹಿನಿ ಸುದ್ದಿ : ನೀಟ್ ಪತ್ರಿಕೆ ಲೀಕ್  ವಿರುದ್ಧ ಹೋರಾಡುತ್ತಿರುವ ಸೋನಮ್ ವಾಂಗ್ಟುಕ್ ಅವರು ಸತತ 26 ದಿನಗಳಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರ ಸಮ್ಮುಖದಲ್ಲಿ ಅವರು ತಡರಾತ್ರಿ ನೀರು ಕುಡಿಯುವ ಮೂಲಕ ತಮ್ಮ ಉಪವಾಸವನ್ನು ಹಿಂಪಡೆದಿದ್ದಾರೆ. 

ದೆಹಲಿಯ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಾಂಗ್ಲುಕ್ ಅವರನ್ನು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಅವರು ಖುದ್ದಾಗಿ ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ವಿವಿಧ ಪ್ರಮುಖ ವಿಷಯಗಳ ಕುರಿತು ಕೇಂದ್ರ ಸರ್ಕಾರದೊಂದಿಗೆ ಸುದೀರ್ಘ ಚರ್ಚೆ ನಡೆಸಿದ ನಂತರ ಉಪವಾಸ ಹಿಂಪಡೆಯಲು ನಿರ್ಧರಿಸಲಾಯಿತು. 

ವಾಂಗ್ಟುಕ್ ಅವರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿದ್ದ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಸುಮಾರು 65 ಸಂಸದರು ಸಹ ಅವರಿಗೆ ಪತ್ರ ಬರೆದು ಹಾಗೂ ಭೇಟಿಯಾಗಿ ಸತ್ಯಾಗ್ರಹವನ್ನು ಅಂತ್ಯಗೊಳಿಸುವಂತೆ ಮನವಿ ಮಾಡಿದ್ದರು.

ನಿರಶನ ಅಂತ್ಯಗೊಳಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಸೋನಮ್ ವಾಂಗ್ಲುಕ್, ಸರ್ಕಾರ ನೀಡಿದ ಭರವಸೆಗಳ ಆಧಾರದ ಮೇಲೆ ಮತ್ತು ದೇಶದಲ್ಲಿ ಯಾವುದೇ ರೀತಿಯ ಹಿಂಸಾಚಾರಕ್ಕೆ ಅವಕಾಶ ನೀಡಬಾರದು ಎಂಬ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. 

ತಾವು ಮಾಡಿಕೊಂಡಿರುವ ಒಪ್ಪಂದದ ಸನ್ನಿವೇಶಗಳ ಬಗ್ಗೆ ಶೀಘ್ರದಲ್ಲೇ ವೀಡಿಯೊ ಮೂಲಕ ವಿವರಣೆ ನೀಡುವುದಾಗಿ ಹೇಳಿರುವ ಅವರು, ಪ್ರತಿಯೊಬ್ಬರೂ ಶಾಂತಿಯುತ ಹಾದಿಯನ್ನೇ ತುಳಿಯಬೇಕು ಮತ್ತು ಯಾವುದೇ ರೀತಿಯ ಪ್ರಚೋದನೆಗೆ ಒಳಗಾಗಬಾರದು ಎಂದು ಬೆಂಬಲಿಗರಲ್ಲಿ ವಿನಂತಿಸಿದ್ದಾರೆ.

ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಾಂಗ್ಲುಕ್ ಅವರ ನಿರ್ಧಾರವನ್ನು ಸ್ವಾಗತಿಸಿದ್ದು, ಅವರ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ. ವೈದ್ಯರ ಸಲಹೆಯಂತೆ ನಡೆದುಕೊಂಡು ವಾಂಗ್ಟುಕ್ ಅವರು ಶೀಘ್ರವೇ ತಮ್ಮ ಹಳೆಯ ಆರೋಗ್ಯ ಸ್ಥಿತಿಗೆ ಮರಳಲಿ ಎಂದು ಪ್ರಧಾನಿ ಪ್ರಾರ್ಥಿಸಿದ್ದಾರೆ. ಕಳೆದ ಜೂನ್ 28ರಿಂದ ಆರಂಭವಾಗಿದ್ದ ಈ ಉಪವಾಸ ಸತ್ಯಾಗ್ರಹವು ದೇಶಾದ್ಯಂತ ವ್ಯಾಪಕ ಗಮನ ಸೆಳೆದಿತ್ತು. ಇದೀಗ ಸರ್ಕಾರದ ಜತೆಗಿನ ಮಾತುಕತೆ ಯಶಸ್ವಿಯಾದ ಬೆನ್ನಲ್ಲೇ ಈ ಸತ್ಯಾಗ್ರಹ ಸುಖಾಂತ್ಯ ಕಂಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button