Latest

ಧೈರ್ಯದ ಬೀಜ ಬಿತ್ತಿ ಕಲ್ಲಿನಂಥ ಕಷ್ಟಗಳ ಕರಗಿಸಿ!


ಜಯಶ್ರೀ ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು

ಅಕ್ಕ ಪಕ್ಕ ಇರುವವರೆಲ್ಲ ಯಾವುದೇ ತೊಂದರೆ ಇಲ್ಲದೇ ಆರಾಮವಾಗಿಯೇ ಇದ್ದಾರೆ. ಕಷ್ಟಗಳೆಲ್ಲ ನನ್ನ ಪಾಲಿಗೇ ಬಂದಂತಿವೆ. ಶನಿ ನನ್ನನ್ನೇ ಸುತ್ತುವರೆಯುತ್ತಿದೆ. ನಾನು ಮಾಡಿರುವ ತಪ್ಪಾದರೂ ಏನು? ಎಂಬ ಪ್ರಶ್ನೆಗಳು ಕಷ್ಟಗಳ ಕಡಲಲ್ಲಿ ಮುಳುಗಿರುವವರಿಗೆ ಮೂಡುವುದು ಸಹಜ.

ನಿಜ, ಕನಸಿನಲ್ಲಿಯೂ ಬಯಸದ ತೊಂದರೆಗಳು ಒಮ್ಮಿಂದೊಮ್ಮೆಲೇ ಕಣ್ಮುಂದೆ ಧುತ್ ಎಂದು ಪ್ರತ್ಯಕ್ಷವಾಗುತ್ತವೆ. ಈ ಹಿಂದೆ ಎಲ್ಲಿಯೂ ಒಂದು ಸಣ್ಣ ಸುಳಿವಿನ ಎಳೆಯನ್ನೂ ಬಿಟ್ಟು ಕೊಡದ ಕಷ್ಟಗಳು, ಆಪತ್ತುಗಳು ಅನಿರೀಕ್ಷಿತವಾಗಿ ನಮ್ಮೆದುರು ಬಂದು ನಿಲ್ಲುತ್ತವೆ. ಪ್ರತಿದಿನ ಯಾವುದಾದರೊಂದು ರೂಪದಲ್ಲಿ ಬಂದು ತಲೆಯನ್ನು ತಿನ್ನುತ್ತವೆ.

ಅವುಗಳ ಮುಂದೆ ತಲೆಬಾಗುವಂತೆ ಮಾಡಿ ನಗುತ್ತವೆ. ಒಮ್ಮೊಮ್ಮೆ ತಲೆಯೇ ಹೋಗಿಬಿಡುತ್ತದೇನೋ ಎಂದೆನಿಸುವ ಮಟ್ಟಕ್ಕೆ ತಂದು ನಿಲ್ಲಿಸುತ್ತವೆ. ಹತ್ತಾರು ವರುಷಗಳ ಸುಮಧುರ ಬಾಂಧವ್ಯಗಳ ನಡುವೆಯೂ ಹಲವಾರು ಏರುಪೇರುಗಳು ತಲೆ ಏರಿ ಕುಳಿತುಕೊಳ್ಳುತ್ತವೆ.

ಮನಸ್ಸನ್ನು ಇನ್ನಿಲ್ಲದಂತೆ ಗಾಯಗೊಳಿಸಿ ಹಣಿಯುತ್ತವೆ. ಬದುಕಿಗೆ ಎಷ್ಟೋ ಸಲ ಸಕಾರಾತ್ಮಕವಾಗಿ ಸ್ಪಂದಿಸಿದರೂ ಫಲ ನೀಡುವುದಿಲ್ಲ. ಇಂಥ ಸಂಕಷ್ಟದ ಸಂದರ್ಭದಲ್ಲಿಯೇ ಕಷ್ಟಗಳು ತಮ್ಮ ಕಬಂಧ ಬಾಹುಗಳನ್ನು ಬಲಪಡಿಸಿಕೊಳ್ಳುತ್ತವೆ ಎನ್ನುವುದು ಹಲವರ ಅನಿಸಿಕೆ.

ಕಷ್ಟಗಳಿಗೆ ಮುಖ ತೋರಿ

ಹಾಗೆ ನೋಡಿದರೆ ಕಷ್ಟಗಳ ವಿರುದ್ಧದ ಸಮರ ಇಂದು ನಿನ್ನೆಯದಲ್ಲ. ಮಾನವ ಜನಾಂಗದ ಹುಟ್ಟಿನಿಂದಲೇ ಬಂದಂತಿರುವ ಇವುಗಳನ್ನು ಅದೆಷ್ಟೋ ಸಲ ನಿಗಚಿ ಒಗೆದಿದ್ದೂ ಇತಿಹಾಸದಲ್ಲಿ ದಾಖಲಾಗಿದೆ. ಹಾಗಿದ್ದಾಗ್ಯೂ ಬೆನ್ನು ಬಿಡದೇ ಕಾಡುತ್ತಿರುವ ಕಷ್ಟಗಳ ಹೆಡಮುರಿಗೆ ಕಟ್ಟಿದಾಗ ಆಗುವ ಆನಂದ ಅಷ್ಟಿಷ್ಟಲ್ಲ.

ಈ ಆನಂದ ಬರೀ ಆನಂದವಾಗಿ ಉಳಿಯದೇ ಕೆಲವೊಮ್ಮೆ ಪ್ರತಿಷ್ಠೆಯ ವಿಷಯವಾಗಿಯೂ ಪರಿವರ್ತನೆಗೊಳ್ಳುತ್ತದೆ. ಕಷ್ಟಗಳಿಗೆ ಬೆನ್ನು ತೋರಿದಾಗ ಹಾದಿ ಬೀದಿಯಲ್ಲಿ ಮರ್ಯಾದೆ ಮಣ್ಣುಪಾಲಾಗಿದ್ದೂ ಉಂಟು. ಅಂದರೆ ಕಷ್ಟಗಳಿಗೆ ಮುಖ ತೋರಿ ಎದುರಿಸದೇ ಹೋದರೆ ತೊಂದರೆ ತಪ್ಪಿದ್ದಲ್ಲ ಎಂದಂತಾಯಿತು.
ಹಾಗಾದರೆ ಕಷ್ಟಗಳ ನಿರ್ವಹಣೆ ನಿವಾರಣೆ ಹೇಗೆ ಎನ್ನುವುದನ್ನು ತಿಳಿಯೋಣ ಬನ್ನಿ.

ಎದುರಿಸಿ ಹೆದರಿಸಿ

ಇತ್ತೀಚಿನ ದಾವಂತ ಜೀವನದ ಮಾನಸಿಕ ಒತ್ತಡಗಳೇ ಸಾಕಷ್ಟು ತೊಂದರೆಗಳನ್ನು ತಂದು ಸುರುವುತ್ತವೆ. ಮಾನಸಿಕ ಒತ್ತಡಗಳಿಗೂ ತೊಂದರೆಗಳಿಗೂ ಹತ್ತಿರದ ಸಂಬಂಧವಿದೆ. ’ಪರಿಶ್ರಮದಿಂದ ದೇಹ ಬಲ ಹೆಚ್ಚುವಂತೆ ತೊಂದರೆಗಳಿಂದ ಮನೋಬಲ ಹೆಚ್ಚಾಗುವುದು’ ಎಂದಿದ್ದಾನೆ ಸಿನೆಕಾ. ಬಂದ ಕಷ್ಟಗಳಿಗೆ ಹೆದರದೇ ಎದುರಿಸಿದ, ಎದುರಿಸಿ ಹೆದರಿಸಿದ ಮಹನೀಯರ ಸಂಖ್ಯೆಯೂ ಕಡಿಮೆಯೇನಿಲ್ಲ.

’ಜೀವನದಲ್ಲಿ ಕಷ್ಟಗಳು ಹೆಚ್ಚಾದಾಗ ಒಂದು ಕ್ಷಣ ಕನ್ನಡಿಯ ಮುಂದೆ ನಿಂತು ಬಿಡಿ. ಅದು ನಿಮ್ಮ ಕಷ್ಟಗಳನ್ನು ಪರಿಹರಿಸಬಲ್ಲ ಅದ್ಭುತ ವ್ಯಕ್ತಿಯನ್ನು ತೋರಿಸುತ್ತದೆ ಎಂದಿದ್ದಾರೆ ಬಲ್ಲವರು.’ ಕಷ್ಟಗಳನ್ನು ನಗಣ್ಯ ಮಾಡುವ ಶಕ್ತಿ ನಿಮ್ಮಲ್ಲಿಯೇ ಇದೆ. ’ಕಷ್ಟಗಳ ಕುರಿತಾಗಿ ಚಿಂತಿಸುತ್ತ ಕುಳಿತರೆ ನೀವೂ ಕಷ್ಟದ ಭಾಗವಾಗುತ್ತೀರಿ. ಪರಿಹಾರದ ಬಗೆಗೆ ಚಿಂತನೆ ನಡೆಸಿದರೆ ಪರಿಹಾರದ ಭಾಗವಾಗುತ್ತೀರಿ’ ಎನ್ನುತ್ತದೆ ಇಂಗ್ಲೀಷಿನ ನಾಣ್ಣುಡಿ. ಇದಕ್ಕೆ ಸಂವಾದಿಯಾಗಿ ಡಿವಿಜಿ ಅವರು ಕಗ್ಗದಲ್ಲಿ ಹೀಗೆ ಹೇಳಿದ್ದಾರೆ.
’ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ.

ಜಾಗರೂಕತೆ ವಹಿಸಿ

ಅಬ್ಬಾ! ಅಂತೂ ಇಂತೂ ಬಂದ ಕಷ್ಟ ಬಗೆಹರಿಯಿತು ಇನ್ನು ಹಾಯಾಗಿ ಇರಬೇಕೆಂದುಕೊಳ್ಳುವಾಗಲೇ ಮತ್ತೊಂದು ಕಷ್ಟ ಎದುರಿಗೆ ಸೆಡ್ಡು ಹೊಡೆದು ನಿಲ್ಲುತ್ತದೆ. ಒಮ್ಮೊಮ್ಮೆಯಂತೂ ಕಷ್ಟಗಳ ಸರಮಾಲೆಯೇ ಪ್ರತ್ಯಕ್ಷವಾಗಿ ಬಿಡುತ್ತದೆ. ಉಸಿರಾಡಲೂ ಬಿಡದಂತೆ ಕಾಡುತ್ತವೆ. ನಿಜ ಹೇಳಬೇಕೆಂದರೆ ಕಷ್ಟಗಳು ನಮ್ಮಲ್ಲಿಯ ನಿಜವಾದ ಆಂತರಿಕ ಶಕ್ತಿಯನ್ನು ಹೊರಗೆಡುವಲು ಅವಕಾಶವನ್ನೀಯುತ್ತವೆ.

ಹೊಸ ಹೊಸ ಅನುಭವಗಳನ್ನು ನೀಡುತ್ತವೆ. ಅದೇ ಅನುಭವಗಳು ತಪ್ಪುಗಳನ್ನು ಕಮ್ಮಿ ಮಾಡುವ ಕಲೆಯನ್ನು ಕಲಿಸುತ್ತವೆ. ಬಾಳಿನ ಹಾದಿಯಲ್ಲಿ ಯಾವಾಗ ಕಷ್ಟ ಯಾವಾಗ ಸುಖದ ಆಗಮನ ಬಲ್ಲವರು ಯಾರೂ ಇಲ್ಲ. ಬರುವ ಕಷ್ಟಗಳಿಗೆ ಬೇಸರಿಸಕೊಂಡರೆ ಒಂದೇ ಒಂದು ಹೆಜ್ಜೆಯನ್ನು ಕಿತ್ತು ಮುಂದಿಡುವುದೂ ಕಷ್ಟವಾಗುತ್ತದೆ.

ಡಿಸ್ರೇಲ್ಸ್ ಹೇಳುವಂತೆ,’ಕಷ್ಟಗಳಿಗಿಂತ ದೊಡ್ಡ ವಿದ್ಯಾ ಗುರು ಇನ್ನಿಲ್ಲ’ ಕಷ್ಟಗಳು ಕಲಿಸುವ ಪಾಠವನ್ನು ಸುಖಗಳು ಕಲಿಸಲಾರವು. ಆಪತ್ತುಗಳು ಕಾರ್ಮೋಡಗಳು ಇದ್ದ ಹಾಗೆ ಒಮ್ಮೆ ಮೋಡ ಸರಿದರೆ ಸಾಕು ಆನಂದದ ತಿಳಿ ಆಗಸ ಕಾಣುವುದು ಆದರೆ ಅಲ್ಲಿಯವರೆಗೆ ಸಹನೆಯ ಕಟ್ಟೆಯೊಡೆಯದ ರೀತಿ ಸಹಿಸಿಕೊಳ್ಳಬೇಕು. ಅಶಿಸ್ತು ಮೈಗೂಡದಂತೆ ಜಾಗರೂಕತೆ ವಹಿಸಬೇಕು.

ಉಸಿರಿನ ಕೊನೆಯವರೆಗೂ ಪಯಣಿಸಿ

ಯಾವುದೇ ಒಂದು ಪಕ್ಷಿಯನ್ನು ಕೈಯಲ್ಲಿ ಹಿಡಿದಾಗ ಅದು ನಮಗಿಂತ ಚಿಕ್ಕದಾಗಿ ಕಾಣುತ್ತದೆ. ಅದೇ ಪಕ್ಷಿ ಆಕಾಶದಲ್ಲಿ ಹಾರುವಾಗ ನಾವು ಅದಕ್ಕೆ ಚಿಕ್ಕದಾಗಿ ಕಾಣುತ್ತೇವೆ. ಕಷ್ಟಗಳೂ ಪಕ್ಷಿಯಂತೆಯೇ ಕೈಯಲ್ಲಿ ಹಿಡಿದು ಪರಿಹರಿಸಲು ಅನುವಾದರೆ ಚಿಕ್ಕದಾಗುತ್ತವೆ. ತಲೆ ಮೇಲೆ ಹಾರಲು ಬಿಟ್ಟರೆ ನಮ್ಮನ್ನೇ ಕುಬ್ಜವಾಗಿಸಿ ನುಂಗಿ ಬಿಡುತ್ತದೆ.

ಕಷ್ಟಗಳು ಕೊಡುವ ಕಷ್ಟವನು ತಾಳಲಾರನೆಂದು ಜೀವನವನ್ನು ಕೊನೆಗಾಣಿಸುವ ವಿಚಾರ ಮಾಡುವುದು ಶುದ್ಧ ತಪ್ಪು. ಬದುಕಿನ ಬಂಡಿಯಲ್ಲಿ ಉಸಿರಿನ ಕೊನೆಯವರೆಗೂ ಪಯಣಿಸಲೇಬೇಕು. ’ಕಷ್ಟದ ಜೀವನವೇ ಶಿಸ್ತನ್ನು ಕಲಿಸುವ ಶಾಲೆ’ ಎಂದಿದ್ದಾರೆ ಗಾಂಧೀಜಿ.

ಕಷ್ಟಗಳಿಗೆ ಅಂಜಿ ಧೈರ್ಯವಿಲ್ಲದವರ ತರಹ ದೂರ ಓಡುವುದು ತರವಲ್ಲ. ನಮಗಿಂತ ಹೆಚ್ಚು ಕಷ್ಟವಿದ್ದರೂ ಚೆಂದದಿ ನಗುತ ಬಾಳುವವರ ಕಂಡು ಬಾಳಬೇಕು. ಕಷ್ಟಗಳ ಕಪಿಮುಷ್ಟಿಯಿಂದ ಬಿಡಿಸಿಕೊಳ್ಳಲು ಎಷ್ಟೇ ಕೊಸರಾಡಿದರೂ ಒಂದರ ಹಿಂದೆ ಒಂದು ನಿಂತು ನಮ್ಮತ್ತ ನೋಡಿ ನಗುತ್ತವೆ. ಅವುಗಳನ್ನು ಬುದ್ಧಿ ಉಪಯೋಗಿಸಿ ಪರಿಹರಿಸಬೇಕು.

ಬುದ್ಧಿವಂತಿಕೆ ಮತ್ತು ತಂತ್ರಗಾರಿಕೆಯ ಮುಂದೆ ಎಂಥ ಕಷ್ಟಗಳಿದ್ದರೂ ಮಂಗಮಾಯ. ಸಮಾಧಾನ ಚಿತ್ತರಾಗಿದ್ದರೆ ಸಾಲು ಸಾಲಾಗಿ ಮುನ್ನುಗ್ಗುವ ಕಷ್ಟಗಳಿಗೇ ಪಾಠ ಕಲಿಸಬಹುದು. ವಾಸ್ತವದಲ್ಲಿ ಕಷ್ಟಗಳು ಅತ್ಯುತ್ತಮ ಮಾರ್ಗದರ್ಶಿಗಳಿದ್ದಂತೆ. ನಮ್ಮಿಂದ ಯಾವುದೇ ಶುಲ್ಕವನ್ನು ನಿರೀಕ್ಷಿಸುವುದಿಲ್ಲ. ಆದರೆ ತಾಳ್ಮೆಯೆಂಬ ಬಹುಮೂಲ್ಯ ಮೌಲ್ಯವನ್ನು ನಾವು ಹೊಂದಿರಲೇಬೇಕು. ಧೈರ್ಯದ ರಕ್ಷಣಾ ಕವಚವನ್ನು ಧರಿಸಿರಲೇಬೇಕು. ಇದು ಗೊತ್ತಿದ್ದೇ ಧೈರ್ಯಂ ಸರ್ವತ್ರ ಸಾಧನಂ ಎಂದು ಹೇಳಿದ್ದಾರೆ

ಓಡುವವರಿಗೆ ಒಂದೇ ದಾರಿ. . . .

ಏರಿಳಿತಗಳಿಲ್ಲದ ಸರಳ ಸುಖಮಯ ಜೀವನವನ್ನು ಎಲ್ಲರೂ ಬಯಸುತ್ತೇವೆ. ಅದಕ್ಕಾಗಿಯೇ ಮನಸ್ಸು ತುಡಿಯುತ್ತದೆ. ಯಾರಿಗೂ ಅನ್ಯಾಯ ಮಾಡಿಲ್ಲ. ಮೋಸ ಮಾಡಿಲ್ಲ. ಆದರೂ ಕಷ್ಟಗಳು ಜೀವ ತಿನ್ನುತ್ತಿವೆ. ದಾರಿದ್ರ್ಯ ಹಿಂಬಾಲಿಸುತ್ತಿದೆ  ಎಂದು ಹಲವರು ಹಲವು ಬಾರಿ ತಮ್ಮ ಸ್ನೇಹಿತರ ಮುಂದೆ ಹಿತೈಷಿಗಳ ಮುಂದೆ ಅಲವತ್ತುಕೊಳ್ಳುತ್ತಲೇ ಇರುತ್ತಾರೆ.’

ಓಡುವವರಿಗೆ ಒಂದೇ ದಾರಿ ಬೆನ್ನು ಹತ್ತಿದವರಿಗೆ ನೂರು ಎಂಬ ರಷ್ಯನ್ ಗಾದೆಯಂತೆ ಮೋಸ ಮತ್ತು ಅನ್ಯಾಗಳಿಂದ ಮಾತ್ರ ಕಷ್ಟಗಳು ಬರುವುದಿಲ್ಲ. ಬದುಕಿನಲ್ಲಿ ನಾವು ಮಾಡಿದ್ದನ್ನೇ ಮರಳಿ ಪಡೆಯುತ್ತೇವೆ. ಹೀಗಾಗಿ ಮಾಡುವ ಚಿಕ್ಕ ಪುಟ್ಟ ತಪ್ಪುಗಳಿಂದ, ದುರ್ವರ್ತನೆಯಿಂದ, ಅಹಂಕಾರದಿಂದ, ಕೆಟ್ಟ ಚಟಗಳಿಂದ ಅಶಿಸ್ತಿನಿಂದ ಅಂಜುಬುರುಕ ಸ್ವಭಾವದಿಂದಲೂ ಕಷ್ಟಗಳು ಹಾಜರಿ ಹಾಕುತ್ತವೆ ಎಂಬುದನ್ನು ಮರೆತಿರುತ್ತೇವೆ.

ಧೈರ್ಯದ ಬೀಜ ಬಿತ್ತಿ

ಬದುಕಿನಲ್ಲಿ ಕಷ್ಟಗಳು ಯಾರಿಗಿಲ್ಲ ಹೇಳಿ? ಎಲ್ಲರೂ ಸಂಕಷ್ಟಗಳ ಸವಾಲುಗಳ ಕಡಲಲ್ಲಿ ಬಿದ್ದವರೇ! ಫಿನಿಕ್ಸ್ ಪಕ್ಷಿಯಂತೆ ಎದ್ದು ಬಂದವರು ಅಸಾಮಾನ್ಯರೆನಿಸಿಕೊಂಡರು. ಎಡರು ತೊಡರುಗಳನ್ನು ಲೆಕ್ಕಿಸದೇ ಒಮ್ಮನಸ್ಸಿನ ಸತ್ಕಾರ್ಯಗಳನ್ನೆಸಗಿ ಮಹಾತ್ಮರೆನಿಸಿಕೊಂಡಿದ್ದಾರೆ. ದಾರ್ಶನಿಕರಾಗಿದ್ದಾರೆ. ನಮಗೆಲ್ಲ ಮಾರ್ಗದರ್ಶಕರಾಗಿದ್ದಾರೆ. ನಾವೂ ಅವರಂತೆಯೇ ಒಳಿತನ್ನು ಯೋಚಿಸಿ ಶುದ್ಧ ಮನಸ್ಸಿನಿಂದ ಒಳ್ಳೆಯ ಕೆಲಸ ಮಾಡಬೇಕು.

ಬಂಗಾರ ಹೊಳೆಯಬೇಕೆಂದರೆ ಸುತ್ತಿಗೆಯ ಏಟು ತಿನ್ನಲೇಬೇಕು ಅಂತೆಯೇ ನಾವು ಸಂಕಷ್ಟಗಳ ಕುಲುಮೆಯಲ್ಲಿ ಬೇಯಲೇಬೇಕು. ಅಂದಾಗ ಮಾತ್ರ ಪುಟಕ್ಕಿಟ್ಟ ಚಿನ್ನದಂತೆ ಹೊಳೆಯಲು ಸಾಧ್ಯ. ಶಾಲೆಗಳಲ್ಲಿ ಗುರುಗಳು ಪಾಠ ಕಲಿಸುವ ರೀತಿಯೇ ಕಷ್ಟಗಳು ಬದುಕಿನ ಕಲೆಯ ಪಾಠವನ್ನು ಕಲಿಸುತ್ತವೆ. ಕಷ್ಟಗಳು ನಾಶಗೊಳಿಸಲು ಬರುತ್ತವೆ ಎಂದು ತಪ್ಪಾಗಿ ಭಾವಿಸಿದ್ದೇವೆ.

ನಮ್ಮಲ್ಲಿ ಅಡಗಿರುವ ಸಾಮರ್ಥ್ಯವನ್ನು ಒರೆಗಲ್ಲಿಗೆ ಹಚ್ಚಿ ಬೆಳಗಿಸುತ್ತವೆ. ಔನತ್ಯದೆಡೆಗೆ ಸಾಗಿಸುತ್ತವೆ. ದುರ್ಗಮವಾದ ಬದುಕಿನ ದಾರಿಯನ್ನು ಸುಗಮಗೊಳಿಸುತ್ತವೆ. ಹಾಗಾಗಿ ಕಷ್ಟಗಳಿಗೆ ಕುಗ್ಗದೇ ಇರಬೇಕು. ಬದುಕಿನ ಓಘದೊಂದಿಗೆ ಪ್ರತಿಕ್ಷಣ ಸವಿಯುತ್ತ ಹರಿಯುವುದನು ಕಲಿಯೋಣ.

ಬರ್ನಾಡ್ ಷಾ ನುಡಿದಂತೆ ’ಹೆಚ್ಚು ಒಳ್ಳೆಯವರಾಗುವುದು ಈ ಲೋಕದಲ್ಲಿ ಬಲು ಕಷ್ಟ..’ ಆದರೂ ಕಷ್ಟಗಳನು ಎದುರಿಸುವುದು ಅಂಥ ಕಷ್ಟವೇನಲ್ಲ ಎಂಬ ಧೈರ್ಯದ ಬೀಜ ಬಿತ್ತಿ ಕಲ್ಲಿನಂಥ ಕಷ್ಟಗಳ ಕರಗಿಸೋಣ!!

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button