*ಸೆಪ್ಟೆಂಬರ್ 12ಕ್ಕೆ ಶ್ರೀ ಸುಧಾ ಕೋ ಆಪರೇಟಿವ್ ಬ್ಯಾಂಕ್ ನ ಸುವರ್ಣ ಮಹೋತ್ಸವ ಕಾರ್ಯಕ್ರಮ : ಅಧ್ಯಕ್ಷರಾದ ಡಾ.ತಿಮ್ಮೇಗೌಡ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ಕಳೆದ ಐವತ್ತು ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿರುವ ಶ್ರೀ ಸುಧಾ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಸುವರ್ಣ ಮಹೋತ್ಸವ ಕಾರ್ಯಕ್ರಮವು ಸೆಪ್ಟೆಂಬರ್ 12 ರಂದು ನಡೆಯಲಿದೆ ಎಂದು ಬ್ಯಾಂಕ್ ಅಧ್ಯಕ್ಷರಾದ ಡಾ.ತಿಮ್ಮೇಗೌಡ ತಿಳಿಸಿದರು.
ಜಯನಗರದಲ್ಲಿರುವ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 50 ವರ್ಷಗಳಿಂದ ಬ್ಯಾಂಕ್ ಗ್ರಾಹಕರ ಸೇವೆಗೆ ಹೆಸರಾಗಿದ್ದು, ಈಗಾಗಲೇ 11 ಶಾಖೆಗಳನ್ನು ಹೊಂದಿದೆ; ಮೈಸೂರು, ಬೆಂಗಳೂರು, ಕಲಬುರಗಿಯಲ್ಲಿ ಇನ್ನೂ 5 ಶಾಖೆಗಳನ್ನು ಶೀಘ್ರವೇ ತೆರೆಯಲಿದೆ ಎಂದರು.
16 ಸಾವಿರ ಸದಸ್ಯರನ್ನು ಬ್ಯಾಂಕ್ ಹೊಂದಿದ್ದು, ದಾಖಲೆಗಳು ಸರಿಯಾಗಿ ಇದ್ದರೆ ಯಾವುದೇ ಮಧ್ಯವರ್ತಿ ಕಾಟವಿಲ್ಲದೇ ಗ್ರಾಹಕರಿಗೆ ಸಾಲ ನೀಡಲಾಗುತ್ತಿದೆ. ವಾಹನ, ವಿದ್ಯಾಭ್ಯಾಸ, ವ್ಯಾಪಾರಕ್ಕಾಗಿ ಸಾಲ ನೀಡಲಾಗುತ್ತಿದೆ. ಇಡೀ ಕರ್ನಾಟಕದಲ್ಲೇ ಉತ್ತಮ ಸಹಕಾರಿ ಬ್ಯಾಂಕ್ ಎಂದು ಗುರುತಿಸಿಕೊಂಡಿದೆ ಎಂದು ತಿಮ್ಮೇಗೌಡರು ಮಾಹಿತಿ ನೀಡಿದರು.
- ವಿಮಾ ಸವಲತ್ತು
ಹಿರಿಯ ನಾಗರೀಕರಿಗೆ ಬ್ಯಾಂಕಿನ ಸದಸ್ಯರುಗಳಿಗೆ ವೈದ್ಯಕೀಯ ನೆರವಿನಡಿಯಲ್ಲಿ 10 ಸಾವಿರದವರೆಗೆ ಒಳರೋಗಿ ಚಿಕಿತ್ಸಾ ವೆಚ್ಚವನ್ನು ಪಾವತಿಸುವ ಯೋಜನೆಯನ್ನು ಸುವರ್ಣ ಸಂಭ್ರಮದ ಪ್ರಯುಕ್ತ ಎರಡು ವರ್ಷಗಳ ಹಿಂದೆ ಪ್ರಾರಂಭಿಸಲಾಗಿದ್ದು, ಅದನ್ನು ಅತ್ಯಂತ ಪ್ರಯೋಜನಕಾರಿಯಾಗಿ ಜಾರಿ ಮಾಡಲಾಗಿದೆ. ಈಗಾಗಲೇ ಸದಸ್ಯರುಗಳಿಗೆ ಪ್ರಧಾನ ಮಂತ್ರಿ ಜೀವನ್ ಬೀಮಾ ಯೋಜನೆ ಹಾಗೂ ಯಶಸ್ವಿನಿ ಆರೋಗ್ಯ ವಿಮೆ ಸೌಲಭ್ಯಗಳ ಸೇವೆಯನ್ನೂ ನೀಡಲಾಗಿದೆ ಎಂದು ತಿಮ್ಮೇಗೌಡ ಹೇಳಿದರು.
- ಖಾತೆದಾರರ ಪತ್ತೆ
ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಬ್ಯಾಂಕ್ ಹಾಕಿಕೊಂಡಿರುವ ಇನ್ನೊಂದು ಮಹತ್ತರ ಯೋಜನೆ, ವಿಳಾಸ ಪತ್ತೆಯಿಲ್ಲದೆ ವಾರಸುದಾರರು ಇಲ್ಲದೆ RBIನ DEAFನಿಧಿಗೆ ವರ್ಗಾವಣೆಯಾದ ಕನಿಷ್ಠ ನೂರು ಠೇವಣಿಗಳ ಠೇವಣಿದಾರರನ್ನು ಪತ್ತೆ ಹಚ್ಚಿ, ವಿಳಾಸ ಹುಡುಕಿಸಿ, ಅವರ ಹಣವನ್ನು ಅವರಿಗೆ ಹಸ್ತಾಂತರಿಸುವುದು. ಈ ಯೋಜನೆಗಗೂ ಈಗಾಗಲೇ ಚಾಲನೆ ನೀಡಲಾಗಿದೆ ಎಂದರು.
ಆರ್‌ಬಿಐ ಮಾರ್ಗಸೂಚಿಯಲ್ಲಿ ಬ್ಯಾಂಕಿನ ಗುಣಮಟ್ಟ ಏರಿಕೆ
2022ರಿಂದ ಶ್ರೀಸುಧಾ ಕೋ ಆಪರೇಟಿವ್ ಬ್ಯಾಂಕ್ ಒಂದು “ಸದೃಢ ಹಣಕಾಸು ನಿರ್ವಹಣಾ ಬ್ಯಾಂಕ್” (FSWM) ಎಂದು ಗುರುತಿಸಿಕೊಂಡಿದ್ದು, ಇದೀಗ ಪ್ರಸಕ್ತ ಸಾಲಿನಲ್ಲಿ Eligibility Criteria for Branch Authorisation ಮಾನದಂಡದಡಿಯಲ್ಲಿ ಸಹಾ ಗುರುತಿಸಲ್ಪಟ್ಟಿದೆ ಎಂದು ತಿಮ್ಮೇಗೌಡ ಹೇಳಿದರು.
ಇದೇ ವೇಳೆ ಮಾತನಾಡಿದ ಉಪಾಧ್ಯಕ್ಷ ವಾಸನ್, 50ನೇ ವರ್ಷ ಪೂರೈಸುವ ಹೊತ್ತಿಗೆ ಕನಿಷ್ಠ 500 ಕೋಟಿ ರುಪಾಯಿಯಷ್ಟು ಠೇವಣಿ ಸಂಗ್ರಹ ಹಾಗೂ 350 ಕೋಟಿ ರುಪಾಯಿಯಷ್ಟು ಸಾಲ ನೀಡಿಕೆ ಸಾಧಿಸಬೇಕೆಂಬ ಗುರಿಯನ್ನು ಬ್ಯಾಂಕ್ ಹೊಂದಿತ್ತು. ಅದನ್ನು ಯಶಸ್ವಿಯಾಗಿ ಸಾಧಿಸಲಾಗಿದೆ ಎಂದರು.
ಸಣ್ಣ ಹಾಗೂ ಮಧ್ಯಮಗಾತ್ರದ ಕೈಗಾರಿಕೆಗಳು, ಗೃಹ ಕೈಗಾರಿಕೆಗಳು, ಸೇವಾ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಆರೋಗ್ಯ ವಲಯ – ಹೀಗೆ ಅನೇಕ ಕ್ಷೇತ್ರಗಳಿಗೆ ಸಾಲ ನೀಡುವ ಮೂಲಕ ದೇಶದ ಪ್ರಗತಿಗೆ ಕೊಡುಗೆ ನೀಡಿದೆ ಎಂದು ವಾಸನ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ನಿರ್ದೇಶಕರಾದ ಕೃಷ್ಣ ಜಿ.ಒ, ಸತ್ಯನಾರಾಯಣಯ್ಯ, ಮುರಳಿ, ಶಶಿಕಿರಣ್, ಸಂಜೀವಯ್ಯ, ಅಮಿತಾ, ವಿಜಯಲಕ್ಷ್ಮಿ, ಹರಿಚರಣ್, ಸಲಹೆಗಾರರಾದ ಯಜ್ಞಮಯ್ಯ, ಪ್ರಧಾನ ವ್ಯವಸ್ಥಾಪಕರಾದ ಕೋಕಿಲ ಎಂ.ಎಸ್, ಹಾಗೂ ಉಪ ಪ್ರಧಾನ ವ್ಯವಸ್ಥಾಪಕರಾದ ಪುಷ್ಪಲತಾ ಸೇರಿದಂತೆ ಬ್ಯಾಂಕ್ ನ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.



