Kannada NewsKarnataka NewsLatest

ಬೀದಿ ನಾಯಿಗಳ ಸಂತಾನಹರಣ; ಅರ್ಜಿಗೆ ಉತ್ತರಿಸದ ಸರಕಾರಕ್ಕೆ ಕೋರ್ಟ್ ತರಾಟೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಬೀದಿ ನಾಯಿಗಳ ಸಂತಾನಹರಣಕ್ಕೆ ಸಂಬಂಧಿಸಿದಂತೆ ‘ಪ್ರಾಣಿಗಳ ಜನನ ನಿಯಂತ್ರಣ (ನಾಯಿ) ನಿಯಮ’ ಜಾರಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿಗೆ ಉತ್ತರಿಸದ ರಾಜ್ಯ ಸರಕಾರವನ್ನು ಹೈಕೋರ್ಟ್‌ ತರಾಟೆ ತೆಗೆದುಕೊಂಡಿದೆ.

ಹಿರಿಯ ನ್ಯಾಯವಾದಿ ವಕೀಲ ಎಲ್‌.ರಮೇಶ್ ನಾಯಕ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಹಾಗೂ ನ್ಯಾಯ ಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಇದು ಬಹು ಸೂಕ್ಷ್ಮವಾದ ವಿಚಾರ. ಇದಕ್ಕೆ ರಾಜ್ಯ ಸರಕಾರ ಸಕಾಲದಲ್ಲಿ ಉತ್ತರಿಸಲು ಹಿಂದೇಟು ಹಾಕುತ್ತಿರುವುದು ಸೂಕ್ತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತು. ಈ ಅರ್ಜಿಗೆ ಸರಕಾರ ಮೂರು ವಾರಗಳಲ್ಲಿ ಉತ್ತರ ನೀಡಬೇಕು. ಇಲ್ಲವಾದಲ್ಲಿ ನ್ಯಾಯಾಲಯವೇ ಆದೇಶ ಹೊರಡಿಸಬೇಕಾಗುತ್ತದೆ ಎಂದು ಎಚ್ಚರಿಸಿತು.

ಅರ್ಜಿಗೆ ಉತ್ತರಿಸಲು ಸರಕಾರದ ಪರ ವಕೀಲರು ಕಾಲಾವಕಾಶ ಕೋರಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಕಳೆದ ಜನವರಿಯಲ್ಲಿ ಅಡ್ವೋಕೇಟ್ ಜನರಲ್ ಈ ಕುರಿತು ಉತ್ತರಿಸಲು ಕೊನೆಯದಾಗಿ ಕಾಲಾವಕಾಶ ಕೇಳಿದ್ದರು. ಈವರೆಗೂ ಉತ್ತರಿಸದೆ ಅದನ್ನೇ ಪುನರಾವರ್ತನೆ ಮಾಡುವುದನ್ನು ಒಪ್ಪಲಾಗದು ಎಂದು ಹೇಳಿತಲ್ಲದೆ ಅರ್ಜಿ ವಿಚಾರಣೆಯನ್ನು ನ.15ಕ್ಕೆ ಮುಂದೂಡಿತು.

ಪ್ರಾಣಿಗಳ ಬಗ್ಗೆ ಕಳಕಳಿ ವ್ಯಕ್ತಪಡಿಸುವುದರಲ್ಲಿ ಯಾವುದೇ ಅಭ್ಯಂತರವಿಲ್ಲ. ಆದರೆ ಅದರಿಂದ ಅವ್ಯವಸ್ಥೆ ಉಂಟಾಗಬಾರದು. ಬೀದಿ ನಾಯಿಗಳಿಗೆ ಯಾವುದೇ ಒಂದೇ ಜಾಗದಲ್ಲಿ ಆಹಾರ ನೀಡುವುದು ಒಳ್ಳೆಯ ಕೆಲಸ. ಇಲ್ಲವಾದಲ್ಲಿ ಆ ಪ್ರದೇಶದಲ್ಲಿ ವಾಸಿಸುವವರು, ಸಂಚರಿಸುವವರಿಗೆ ತೊಂದರೆಯಾಗಬಹುದು ಎಂದು ನ್ಯಾಯಾಲಯ ಹೇಳಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button