
ಪ್ರಗತಿವಾಹಿನಿ ಸುದ್ದಿ: ತಿಗಣೆ, ಜಿರಳೆ, ಹಲ್ಲಿ ಇಂತಹ ಕೀಟಗಳು ಬಾರದಿರಲಿ ಎಂದು ಸಿಂಪಡಿಸುವ ಔಷಧಗಳು ಮನುಷ್ಯನಿಗೆ ಅದೆಷ್ಟು ವಿಷಕಾರಿ ಎಂಬುದಕ್ಕೆ ಈ ಘಟನೆ ಸಾಕ್ಷಿ. ತಿಗಣೆ ಔಷಧಿ ವಾಸನೆಯಿಂದ ವಿದ್ಯಾರ್ಥಿಯೊಬ್ಬ ವಾಸವಾಗಿದ್ದ ಪಿಜಿ ಕೊಠಡಿಯಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಹೆಚ್ ಎ ಎಲ್ ಪೊಲೀಸ್ ಠಾಣೆ ವ್ಯಾಪ್ತಿಯ ಪಿಜಿಯಲ್ಲಿ ಈ ದುರಂತ ಸಂಭವಿಸಿದೆ. ಬಿಟೆಕ್ ವಿದ್ಯಾರ್ಥಿ ಪವನ್ ಮೃತ ಯುವಕ. ಆಂಧ್ರಪ್ರದೇಶದ ತಿರುಪತಿ ಮೂಲದ ಪವನ್ ಬಿಟೆಕ್ ಓದಲೆಂದು ಬೆಂಗಳೂರಿನ ಹೆಚ್ ಎ ಎಲ್ ಬಳಿ ಪಿಜಿಯಲ್ಲಿ ವಾಸವಾಗಿದ್ದ. ನಿನ್ನೆ ಪಿಜಿಯ ರೂಮುಗಳಿಗೆ ಸಿಬ್ಬಂದಿಗಳು ತಿಗಣೆ ಔಷಧಿ ಸಿಂಪಡಿಸಿದ್ದರಂತೆ. ಈ ವಿಚಯ ಗೊತ್ತಾಗದೇ ಪವನ್ ಪಿಜಿಯ ರೂಮಿಗೆ ಬಂದು ಮಲಗಿದ್ದ. ಔಷಧಿ ವಾಸನೆಯಿಂದ ಅಸ್ವಸ್ಥಗೊಂಡಿರುವ ಪವನ್ ಇಂದು ರೂಮಿನಲ್ಲಿಯೇ ಶವವಾಗಿ ಪತ್ತೆಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಹಬ್ಬದ ಸಂದರ್ಭದಲ್ಲಿ ಮಗನನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.