
ಪ್ರಗತಿವಾಹಿನಿ ಸುದ್ದಿ: ಸುರೇಬಾನ ನಾಡಕಚೇರಿಯ ಅವ್ಯವಸ್ಥೆ ಆಗರಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಎಂಟು ದಿನಗಳಿಂದ ನಾಡ ಕಛೇರಿಯಲ್ಲಿ ಸರ್ವರ್ ಇಲ್ಲದ ಕಾರಣ ವಿದ್ಯಾರ್ಥಿಗಳು ತಮ್ಮ ಮುಂದಿನ ವ್ಯಾಸಾಂಗಕ್ಕೆ ಬೇಕಾಗುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ನಾಡ ಕಛೇರಿಗೆ ಅಲೆದಾಡಿ ಸುಸ್ತಾಗಿದ್ದಾರೆ.
ನಾಡ ಕಛೇರಿಯ ಸಿಬ್ಬಂದಿಗಳನ್ನು ಕೇಳಿದರೆ ಅವರು ಸರ್ವರ್ ಇಲ್ಲಾ ಅಂತಾ ಹೇಳುತ್ತಿದ್ದಾರೆ. ನಮ್ಮ ಮಕ್ಕಳ ಮುಂದಿನ ವ್ಯಾಸಾಂಗಕ್ಕಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇಲ್ಲದಿದ್ದರೆ ಹೆಚ್ಚುವರಿಯಾಗಿ ಹಣ ಸಂದಾಯ ಮಾಡಬೇಕಾಗುತ್ತದೆ. ಈಗ ಮಳೆ ಇಲ್ಲದೆ ಬರಗಾಲ ಬಿದ್ದು ಹಣಕ್ಕಾಗಿ ಎಲ್ಲೆಂದರಲ್ಲಿ ಸಾಲ-ಸೂಲ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ಮಕ್ಕಳ ಪಾಲಕರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಇದರ ಕುರಿತು ನಾಡ ಕಚೇರಿಯ ಸಿಬ್ಬಂದಿಗಳನ್ನು ಸಂಪರ್ಕಿಸಲು ಅವರು, ಈಗಿರುವ ಸಾಫ್ಟ್ ವೇರ್ ಎನ್ಕೆ 4 ಇದ್ದದ್ದನ್ನು ಎನ್ಕೆ 5 ಸಾಫ್ಟ್ ವೇರ್ ಆಗಿ ಪರಿವರ್ತನೆ ಮಾಡಲಾಗುತ್ತಿದೆ. ಈ ಎನ್ಕೆ 5ದಲ್ಲಿ ನಾಡಕಚೇರಿಯಲ್ಲಿ ಪಡೆಯಬೇಕಾಗಿದ್ದ ಎಲ್ಲಾ ಪ್ರಮಾಣ ಪತ್ರಗಳಿಗೆ ಸಾರ್ವಜನಿಕರು ಪೂರಕ ದಾಖಲಾತಿಗಳನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ. ಆದ ಕಾರಣ ತೊಂದರೆಯಾಗುತ್ತಿದೆ ಎಂದು ನಾಡಕಚೇರಿ ಸಿಬ್ಬಂದಿ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲಾದ್ಯಂತ ಎಲ್ಲಾ ಸೇವಾಕೇಂದ್ರಗಳಲ್ಲೂ ಸರ್ವರ್ ಸಮಸ್ಯೆಯಾಗುತ್ತಿದೆ ಎಂದು ಸೇವಾ ಕೇಂದ್ರಗಳ ನಿರ್ವಹಣೆಗಾರರು ತಿಳಿಸಿದ್ದಾರೆ.
ಈ ಬಗ್ಗೆ ಮಾತನಡಿರುವ ರಾಮದುರ್ಗ ತಹಶಿಲ್ದಾರ್ ಸುರೇಶ ಚವಲಾರ, ನಾಡ ಕಚೇರಿಯಲ್ಲಿ ಸರ್ವರ್ ಸಮಸ್ಯೆ ಆಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ, ಜಿಲ್ಲಾ ಕಚೇರಿಯಲ್ಲಿ ಇಜಿಎಸ್ ಕೆ ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿಯೊಂದಿಗೆ ಮಾತನಾಡಿ ಈಗ ಆಗುತ್ತಿರುವ ಸಮಸ್ಯೆಯನ್ನು ನಾಳೆ ಬಗೆಹರಿಸುತ್ತೇವೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ