Kannada NewsKarnataka NewsLatest

*ಮುಜರಾಯಿ/ಧಾರ್ಮಿಕ ಇಲಾಖೆಗೆ ಬಜೆಟ್​​ನಲ್ಲಿ ಸಿಕ್ಕಿದ್ದೇನು?*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಮುಜರಾಯಿ ಇಲಾಖೆಗೆ ಹಲವು ಕೊಡುಗೆ ಘೋಷಿಸಲಾಗಿದೆ. ಕರ್ನಾಟಕ ರಾಜ್ಯದಿಂದ ಶ್ರೀ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಸರ್ಕಾರದಿಂದ ತಲಾ 5,000 ರೂ.ಗಳ ಸಹಾಯಧನವನ್ನು ಡಿ.ಬಿ.ಟಿ ಮೂಲಕ ವಿತರಿಸಲು ಉದ್ದೇಶಿಸಲಾಗಿದೆ.

Home add -Advt

ಈ ಉದ್ದೇಶಕ್ಕೆ ಐದು ಕೋಟಿ ರೂ. ಅನುದಾನ ಮೀಸಲಿರಿಸಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯʼ ಮತ್ತು ʻಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯʼಗಳಿಗೆ ಮೂಲಭೂತ ಸೌಲಭ್ಯ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಅಭಿವೃದ್ಧಿ ಪ್ರಾಧಿಕಾರಗಳನ್ನು ರಚಿಸಲು ಉದ್ದೇಶಿಸಿದೆ.

ಬೆಂಗಳೂರು ನಗರದ ಹೃದಯ ಭಾಗವಾದ ಕೆಂಪೇಗೌಡ ವೃತ್ತದಲ್ಲಿ ಇಲಾಖೆಗೆ ಸೇರಿದ ಬಂಡಿಶೇಷಮ್ಮ ಛತ್ರದ ಜಾಗದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ವಸತಿ ಸೌಲಭ್ಯ ಕಲ್ಪಿಸಲು ವಿದ್ಯಾರ್ಥಿ ನಿಲಯ ಹಾಗೂ ವಾಣಿಜ್ಯ ಸಂಕೀರ್ಣವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಡಿ (PPP) ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳ ವರ್ಗಾವಣೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ತರಲು ತಂತ್ರಜ್ಞಾನ ಆಧಾರಿತ ಕೌನ್ಸೆಲಿಂಗ್ (Counselling) ವ್ಯವಸ್ಥೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ.

ಆರ್‌.ವಿ. ದೇಶಪಾಂಡೆರವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ಸಲ್ಲಿಸಿರುವ 10 ವರದಿಗಳಲ್ಲಿನ 6,031 ಶಿಫಾರಸ್ಸುಗಳ ಪೈಕಿ 2,014 ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲಾಗಿದೆ. ಉಳಿದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು.

ರಾಜ್ಯದ ಎಲ್ಲಾ ಅಂಗನವಾಡಿಗಳು, ಶಾಲೆಗಳು, ಕಾಲೇಜುಗಳು ಹಾಗೂ ವಸತಿನಿಲಯಗಳಲ್ಲಿ AI ಆಧಾರಿತ Facial Recognition ಸಾಫ್ಟ್‌ವೇರ್‌ ಮುಖಾಂತರ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಹಾಗೂ ಪ್ರತಿದಿನದ ಫಲಾನುಭವಿಗಳ ಹಾಜರಾತಿ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗುವುದು.


Related Articles

Back to top button