Kannada NewsKarnataka NewsLatest

*ಗೃಹಜ್ಯೋತಿ ಯೋಜನೆಯಿಂದ 1.3 ಲಕ್ಷ ಗ್ರಾಹಕರು ಹೊರಕ್ಕೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯಿಂದ ಬರೋಬ್ಬರಿ 1.3 ಲಕ್ಷ ಗ್ರಾಹಕರು ಹೊರನಡೆದಿದ್ದಾರೆ.

ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್ ಪಡೆಯುತ್ತಿದ್ದ 1.3 ಲಕ್ಷ ಗ್ರಾಹಕರು ವೈಯಕ್ತಿಕ ದಾಖಲೆ ನೀಡಲು ನಿರಾಕರಿಸಿ ಯೋಜನೆಯಿಂದ ಹೊರನಡೆದಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಮೂರು ವರ್ಷಗಳಿಂದ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದರೂ, ಇತ್ತೀಚೆಗೆ ಇಂಧನ ಇಲಾಖೆ ನಡೆಸಿದ ಮನೆಮನೆ ಪರಿಶೀಲನಾ ಅಭಿಯಾನದಲ್ಲಿ ವೈಯಕ್ತಿಕ ದಾಖಲೆಗಳನ್ನು ನೀಡಲು ನಿರಾಕರಿಸಿ ಯೋಜನೆಯಿಂದ ಹೊರಗುಳಿಯಲು ಇಚ್ಛಿಸಿದ್ದಾರೆ.

ಈ ಪೈಕಿ ಬೆಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ (ಬೆಸ್ಕಾಂ) ವ್ಯಾಪ್ತಿಯೊಂದರಲ್ಲೇ ಅತ್ಯಧಿಕ ಅಂದರೆ 1.2 ಲಕ್ಷ ಗ್ರಾಹಕರು ಯೋಜನೆ ಬೇಡವೆಂದು ತಿಳಿಸಿದ್ದಾರೆ. ಮನೆಮನೆಗೆ ಭೇಟಿ ನೀಡಿದ ಸಿಬ್ಬಂದಿಗೆ ಆಧಾರ, ಪಾನ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿಗಳನ್ನು ನೀಡಲು ಗ್ರಾಹಕರು ಹಿಂದೇಟು ಹಾಕಿದ್ದಾರೆ. ವಿಶೇಷವಾಗಿ ದೊಡ್ಡ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ನಿವಾಸಿಗಳು ತಮ್ಮ ವೈಯಕ್ತಿಕ ಮಾಹಿತಿ ಹಾಗೂ ದಾಖಲೆಗಳು ದುರುಪಯೋಗವಾಗಬಹುದು ಎಂಬ ಗೌಪ್ಯತೆಯ ಭೀತಿಯಿಂದ ದಾಖಲೆ ಹಂಚಿಕೊಳ್ಳಲು ಒಪ್ಪಿಲ್ಲ.

ರಾಜ್ಯದಲ್ಲಿ ಒಟ್ಟು 2.1 ಕೋಟಿ ಗೃಹ ಬಳಕೆಯ ವಿದ್ಯುತ್ ಗ್ರಾಹಕರಿದ್ದು, 1.8 ಕೋಟಿ ಗ್ರಾಹಕರು ಯೋಜನೆಯಡಿ ನೋಂದಾಯಿಸಿಕೊಂಡಿದ್ದರು. ಆದರೆ ಮನೆಮನೆ ಸಮೀಕ್ಷೆ ವೇಳೆ ಸುಮಾರು 25.7 ಲಕ್ಷ ಅರ್ಹ ಗ್ರಾಹಕರು ನಿಗದಿತ ಸಮಯದಲ್ಲಿ ಪರಿಶೀಲನೆಗೆ ಲಭ್ಯವಾಗಿಲ್ಲ ಅಥವಾ ದಾಖಲೆ ಸಲ್ಲಿಸಿಲ್ಲ. ಪರಿಶೀಲನೆಗೆ ತಪ್ಪಿಸಿಕೊಂಡ ಗ್ರಾಹಕರು ತಮ್ಮ ಹತ್ತಿರದ ಉಪವಿಭಾಗೀಯ ಕಚೇರಿಗೆ ಭೇಟಿ ನೀಡಿ ಅಕ್ಟೋಬರ್ 31ರೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಅಧಿಕಾರಿಗಳು ಮತ್ತೊಂದು ಅವಕಾಶ ನೀಡಿದ್ದಾರೆ.

ಬೆಸ್ಕಾಂ ವ್ಯಾಪ್ತಿಯಲ್ಲಿ 16 ಲಕ್ಷ ಮಂದಿಯ ದಾಖಲೆಗಳು ಇನ್ನು ಲಭ್ಯವಾಗಿಲ್ಲ. ಪರಿಶೀಲನೆಗೆ ತಪ್ಪಿಸಿಕೊಂಡವರು ಅಕ್ಟೋಬರ್ 31 ರೊಳಗೆ ಉಪವಿಭಾಗೀಯ ಕಚೇರಿಗೆ ದಾಖಲೆ ಸಲ್ಲಿಸದಿದ್ದರೆ ಯೋಜನೆಯಿಂದ ಶಾಶ್ವತವಾಗಿ ಹೊರಗುಳಿಯಲಿದ್ದಾರೆ.

Related Articles

Back to top button