ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮವಹಿಸಿ : ಜಿಪಂ ಸಿಇಒ ರಾಹುಲ್ ಶಿಂಧೆ

ಪ್ರಗತಿವಾಹಿನಿ ಸುದ್ದಿ: ಅಥಣಿ ತಾಲೂಕು ಪಂಚಾಯತಗೆ ಭೇಟಿ ನೀಡಿ ಮಾತನಾಡಿದ ಜಿಪಂ ಸಿಇಒ ರಾಹುಲ್ ಶಿಂಧೆ ರವರು ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ ವಹಿಸಬೇಕು, ಆರ್ ಓ ಪ್ಲಾಂಟ್ ಗಳನ್ನು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು, ನರೇಗಾ ಸಮುದಾಯ ಕಾಮಗಾರಿಗಳು ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಪ್ರಾರಂಭಿಸಬೇಕು. ಈ ಅವಧಿಯಲ್ಲಿ ಎಲ್ಲ ಕೂಲಿ-ಕಾರರಿಗೆ ಕೆಲಸ ಕೊಡಬೇಕು ಹಾಗೂ ಕೆಲಸದ ಸ್ಥಳದಲ್ಲಿ ನೆರಳಿನ ವ್ಯವಸ್ಥೆ ಕಲ್ಪಿಸುವುದು, ಶುದ್ಧ ಕುಡಿಯುವ ನೀರು, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಕಡ್ಡಾಯವಾಗಿ ನಿರ್ವಹಿಸಬೇಕೆಂದು ತಾಲೂಕಿನ ಎಲ್ಲ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಅಥಣಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಂದುವರೆದು, ಪ್ರತಿಯೊಬ್ಬ ವಿಕಲಚೇತನರಿಗೆ ಜಾಬ್ ಕಾರ್ಡ್ ಗಳನ್ನು ಕಡ್ಡಾಯವಾಗಿ ನೀಡಬೇಕು ಹಾಗೂ ಅವರಿಗೆ ಕೆಲಸವನ್ನು ಕೊಡಬೇಕು ಎಂದು ತಿಳಿಸಿ, ನಂತರ ಹೆಸ್ಕಾಂ ಬಿಲ್ ಮರು ಹೊಂದಾಣಿಕೆ ಸಂಬಂಧ ಗ್ರಾಮ ಪಂಚಾಯತಿಯಿಂದ ಬಂದ ಅರ್ಜಿಗಳನ್ನು ಪರಿಶೀಲನೆ ಮಾಡಿದರು.
ರಾಯಬಾಗ ತಾಲೂಕಿನ ಕೊಳಿಗುಡ್ಡ ಗ್ರಾಮ ಪಂಚಾಯತ ವ್ಯಾಪ್ತಿಯ ನರೇಗಾ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿ ಸ್ಥಳದಲ್ಲಿನ ಮೂಲ-ಸೌಕರ್ಯಗಳನ್ನು ಪರಿಶೀಲಿಸಿ, ಕೂಲಿ-ಕಾರ್ಮಿಕರಿಗೆ ಸಲಹೆಗಳನ್ನು ನೀಡಿದರು.
ತರುವಾತ ಕಪ್ಪಲಗುದ್ದಿ ಗ್ರಾಮ ಪಂಚಾಯತ ವ್ಯಾಪ್ತಿಯ ಸುಲ್ತಾನಪೂರ ಗ್ರಾಮಕ್ಕೆ ಭೇಟಿ ನೀಡಿ, ಕುಡಿಯುವ ನೀರಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ ವಹಿಸಲು ಹಾಗೂ ಆರ್ ಓ ಪ್ಲಾಂಟ್ ಗಳನ್ನು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಲು ಸಹಾಯಕ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ರಾಯಬಾಗ ರವರಿಗೆ ಸೂಚಿಸಿದರು.
ಎರಡನೆಯದಾಗಿ ರಾಯಬಾಗ ಪಟ್ಟಣದ ಕೆ.ಇ.ಬಿ. ಸಭಾ ಭವನದಲ್ಲಿ ಎಲ್ಲ ತಾಲೂಕಾ ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಸೂಕ್ತ ಸಲಹೆ ಮತ್ತು ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಅಥಣಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ, ಕಾಗವಾಡ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣಾವಾಲಿ, ರಾಯಬಾಗ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಕದ್ದು, ಸಹಾಯಕ ಕಾರ್ಯಪಾಲಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ರಾಯಬಾಗ ಮತ್ತು ಅಥಣಿ ತಾಪಂ, ಹೆಸ್ಕಾಂ ಲೆಕ್ಕಾಧಿಕಾರಿಗಳು ರಾಯಬಾಗ ಮತ್ತು ಅಥಣಿ ತಾಪಂ, ಸಹಾಯಕ ನಿರ್ದೇಶಕರು(ಪಂರಾ ಹಾಗೂ ಗ್ರಾಉ) ರಾಯಬಾಗ ಮತ್ತು ಅಥಣಿ ತಾಪಂ ಮತ್ತು ಎಲ್ಲ ತಾಲೂಕು ಪಂಚಾಯತ ಸಿಬ್ಬಂದಿ ವರ್ಗದವರು ಹಾಜರಿದ್ದರು.