Latest

ಸಾರ್ವಜನಿಕವಾಗಿ ಮರಣ ದಂಡನೆ ಕ್ರಮ ಸಮರ್ಥಿಸಿಕೊಂಡ ತಾಲಿಬಾನ್

ಪ್ರಗತಿವಾಹಿನಿ ಸುದ್ದಿ, ಕಾಬೂಲ್: ಕೊಲೆ ಆರೋಪಿಗೆ ಬುಧವಾರ ಸಾರ್ವಜನಿಕವಾಗಿ  ಮರಣದಂಡನೆ ವಿಧಿಸಿದ ಕ್ರಮಕ್ಕೆ ಜಾಗತಿಕ ಮಟ್ಟದ ಆಕ್ರೋಶ ಮತ್ತು ಟೀಕೆಗಳ ನಡುವೆ, ತಾಲಿಬಾನ್ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.

ಇದು ದೇಶದ ಆಂತರಿಕ ವ್ಯವಹಾರ. ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿರೋಧ  ಖಂಡನೀಯ ಎಂದಿದೆ.

ಇಸ್ಲಾಂ ಮತ್ತು ಅಫ್ಘಾನಿಸ್ತಾನದ ಬಗ್ಗೆ ಮಾಹಿತಿಯ ಕೊರತೆಯಿಂದಾಗಿ ಅವರ ಕ್ರಮವನ್ನು ಟೀಕಿಸಲಾಗಿದೆ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿಕೆ ನೀಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಶೇ. 99 ರಷ್ಟು ಜನರು ಮುಸ್ಲಿಮರೇ ಇದ್ದಾರೆ ಎಂಬುದು ತಿಳಿದಿರಬೇಕು ಎಂದು ಅವರು ಹೇಳಿದ್ದಾರೆ.

ಕಳೆದ ಬುಧವಾರ ಕೊಲೆಯ ಆರೋಪಿಯೊಬ್ಬನಿಗೆ ಸಾರ್ವಜನಿಕ ಮರಣದಂಡನೆ ವಿಧಿಸಿದ ನಂತರ ತಾಲಿಬಾನ್ ನ್ನು ಯುಎಸ್ ಮತ್ತು ವಿಶ್ವಸಂಸ್ಥೆ ಟೀಕಿಸಿದ್ದವು. ಇದು ಕರ್ಮಠ ಇಸ್ಲಾಮಿಸ್ಟ್ ಗಳು ಅಧಿಕಾರಕ್ಕೆ ಮರಳಿದ ನಂತರದ ಮೊದಲ ‘ಅಧಿಕೃತ ಹತ್ಯೆ’ಯಾಗಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿತ್ತು.

ಅಫ್ಘಾನಿಸ್ತಾನದಲ್ಲಿ ಇಸ್ಲಾಮಿಕ್ ಕಾನೂನುಗಳನ್ನು ಜಾರಿಗೊಳಿಸಲು ತಾವು ಅನೇಕ  ಬಲಿದಾನಗಳನ್ನು ಮಾಡಿರುವುದಾಗಿ ಹೇಳಿರುವ ತಾಲಿಬಾನ್ ವಕ್ತಾರ  ಮುಜಾಹಿದ್, ಅಮೆರಿಕ, ಯುರೋಪ್ ಸೇರಿದಂತೆ ವಿಶ್ವದಾದ್ಯಂತ ಅನೇಕ ರಾಷ್ಟ್ರಗಳಲ್ಲಿ ಹಲವರಿಗೆ ಮರಣ ದಂಡನೆ ಶಿಕ್ಷೆ ನೀಡಲಾಗಿದೆ ಎಂದು ತಿರುಗೇಟು ನೀಡಿದ್ದಾರೆ.

ಮೃದು ಆಡಳಿತದ ಭರವಸೆ ನೀಡಿ ಅಧಿಕಾರಕ್ಕೆ ಬಂದು ಅಮಾನವೀಯ ಕಾನೂನುಗಳನ್ನು ಜಾರಿಗೊಳಿಸುತ್ತಿರುವ ತಾಲಿಬಾನ್ ಜಗತ್ತಿಗೆ ನೀಡಿದ ಭರವಸೆಗಳನ್ನು ತಾನೇ ಮುರಿಯುತ್ತಿದೆ ಎಂದು ಜಾಗತಿಕ ಮಟ್ಟದಲ್ಲಿ ವ್ಯಾಪಕ ಟೀಕೆ ನಿರಂತರವಾಗಿ ಕೇಳಿಬರುತ್ತಿದೆ.

2022ರಲ್ಲಿ 2 ಸಾವಿರಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ ಗಳ ಕಾರ್ಯಾಚರಣೆ ಸ್ಥಗಿತ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button