ಪ್ರಗತಿವಾಹಿನಿ ಸುದ್ದಿ, ಚಂಡಿಗಡ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆಗೆ ಶಸ್ತ್ರಾಸ್ತ್ರ ಪೂರೈಸಿದ ಆರೋಪಿಯನ್ನು ಪೊಲೀಸರು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಿದ್ದಾರೆ.
ಶಸ್ತ್ರಾಸ್ತ್ರ ವ್ಯಾಪಾರಿ ಧರಂಜ್ಯೋತ್ ಸಿಂಗ್ ಕಹ್ಲೋನ್ ಬಂಧಿತ. ಈತ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ನಿಕಟವರ್ತಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಜೈಲಿನಲ್ಲಿದ್ದ ಲಾರೆನ್ಸ್ ಬಿಷ್ಣೋಯ್ ಅಲ್ಲಿಂದಲೇ ಸಿಧು ಮೂಸೆವಾಲಾ ಅವರನ್ನು ಹತ್ಯೆ ಮಾಡಿಸಿದಲ್ಲದೆ ಹತ್ಯೆ ಹಿಂದೆ ತಾನೇ ಇರುವುದಾಗಿ ಘೋಷಿಸಿಕೊಂಡಿದ್ದ.
ಈ ಹತ್ಯೆ ನಡೆಸಲು ಪಂಜಾಬ್‌ನ ಅಮೃತಸರದಲ್ಲಿ ವಾಸಿಸುತ್ತಿದ್ದ ಧರಂಜ್ಯೋತ್ ಸಿಂಗ್ ಕಹ್ಲೋನ್ ಎಕೆ-47 ರೈಫಲ್‌ಗಳು ಮತ್ತು ಇತರ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಿದ ಆರೋಪಗಳನ್ನೂ ಎದುರಿಸುತ್ತಿದ್ದಾನೆ. ಈತ ಸಿಧು ಮೂಸೆವಾಲಾ ಹತ್ಯೆಗೈದ ಶೂಟರ್ ಗಳಿಗೆ ಶಸ್ತ್ರಾಸ್ತ್ರ ಪೂರೈಸಿದ್ದ.
ಸಿಧು ಮೂಸೆವಾಲಾ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಲಾರೆನ್ಸ್ ಬಿಷ್ಣೋಯ್ ಸಹಚರ ಸಚಿನ್ ಬಿಷ್ಣೋಯ್ ಪೊಲೀಸರ ಮುಂದೆ ಶಸ್ತ್ರಾಸ್ತ್ರ ಪೂರೈಕೆಯ ವಿಷಯ ಬಾಯಿಬಿಟ್ಟಿದ್ದ ಹಿನ್ನೆಲೆಯಲ್ಲಿ ತನಿಖೆ ಕೈಗೊಳ್ಳಲಾಗಿತ್ತು. 2022ರ ಮೇ 29ರಂದು ಪಂಜಾಬ್ ನ ಮಾನ್ಸಾದಲ್ಲಿ 28 ವರ್ಷದ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ