ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಷ್ಟ್ರದ ರಪ್ತು ಪ್ರಮಾಣ ಈ ವರ್ಷ ಐತಿಹಾಸಿಕ ದಾಖಲೆಯಾಗಲಿದೆ ಎಂದು ಕೇಂದ್ರ ವಾಣಿಜ್ಯ, ಜವಳಿ ಮತ್ತು ಕೈಗಾರಿಕೆ ಸಚಿವ ಪಿಯುಷ್ ಗೋಯಲ್ ತಿಳಿಸಿದ್ದಾರೆ.
ಬೆಳಗಾವಿಯ ವಾಣಿಜ್ಯೋದ್ಯಮ ಸಂಸ್ಥೆ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಣಾಳಿಕೆ ಸಲಹಾ ಸ್ವೀಕೃತಿ ಸಭೆಯಲ್ಲಿ ಮಾತನಾಡಿದ ಅವರು, ಈ ವರ್ಷ ಉತ್ಪಾದನಾ ವಲಯ ಮತ್ತು ಸೇವಾ ವಲಯದ ರಪ್ತು ಪ್ರಮಾಣ 750 ಬಿಲಿಯನ್ ದಾಟಲಿದೆ. ಇದು ಹೊಸ ದಾಖಲೆಯಾಗಲಿದೆ ಎಂದು ತಿಳಿಸಿದರು.
‘ಕರ್ನಾಟಕ ತಂತ್ರಜ್ಞಾನದ ತವರು. ದೇಶದ ಪ್ರಗತಿಯಲ್ಲಿ ಕರ್ನಾಟಕದ ಕೊಡುಗೆ ದೊಡ್ಡದಿದೆ. ಬೆಳಗಾವಿ, ಉತ್ತರ ಕರ್ನಾಟಕ ಅಭಿವೃದ್ಧಿ ಮೂಲಕ ದೇಶವನ್ನು ವಿಶ್ವದ ಶಕ್ತಿಯಾಗಿ ರೂಪಿಸಲು ನಿಮ್ಮೆಲ್ಲರ ಕೊಡುಗೆ ಅಗತ್ಯ’ ಎಂದುಅಭಿಪ್ರಾಯಪಟ್ಟರು.
‘ಬೆಳಗಾವಿ ಕಾಸ್ಟಿಂಗ್ ಕೈಗಾರಿಕೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಇಲ್ಲಿ 3,500ಕ್ಕೂ ಅಧಿಕ ಕೈಗಾರಿಕೆಗಳಿವೆ. ಈ ಕ್ಷೇತ್ರದಲ್ಲಿ ಯಾವುದೇ ರಾಷ್ಟ್ರ ಕೂಡ ಬೆಳಗಾವಿಗೆ ಪೈಪೋಟಿಗೆ ನೀಡಲು ಸಾಧ್ಯವಿಲ್ಲ’ ಎಂದರು.
‘ಬೆಳಗಾವಿಯ ರಕ್ಷಣಾ ಇಲಾಖೆಯ 750 ಎಕರೆ ಜಾಗವನ್ನು ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರಿಸಲು ಶಾಸಕ ಅಭಯ ಪಾಟೀಲ ಬೇಡಿಕೆ ಇರಿಸಿದ್ದಾರೆ. ಆದರೆ, ದೇಶದ ಭದ್ರತೆ ದೃಷ್ಟಿಯಿಂದ ಇದು ಸೂಕ್ಷ್ಮ ವಿಷಯವಾಗಿರುವುದರಿಂದ ರಕ್ಷಣಾ ಇಲಾಖೆ ಸಚಿವರೊಂದಿಗೆ ಚರ್ಚಿಸುತ್ತೇನೆ. ಆದರೆ, ರಕ್ಷಣಾ ಇಲಾಖೆ ಜಾಗದಲ್ಲೇ ರಕ್ಷಣಾ ಇಲಾಖೆಗೆ ಪೂರಕವಾದ ಕೈಗಾರಿಕೆಗಳ ಸ್ಥಾಪಿಸುವ ಬೇಡಿಕೆಯಿಟ್ಟರೆ, ಜಾಗದ ಸದ್ಬಳಕೆಯಾಗುತ್ತದೆ. ಸ್ಥಳೀಯ ಅಭಿವೃದ್ಧಿಗೂ ಅನುಕೂಲವಾಗುತ್ತದೆ’ ಎಂದು ಸಲಹೆ ನೀಡಿದರು.
‘ಕೇಂದ್ರ ಸರ್ಕಾರದ ಖರೀದಿ ಮತ್ತು ಗುತ್ತಿಗೆ ನಿರ್ವಹಿಸುವ ತಂತ್ರಾಂಶದ ಬಗ್ಗೆ ಬೆಳಗಾವಿಯ ಕೈಗಾರಿಕೋದ್ಯಮಗಳಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು. ರಫ್ತು ಕೇಂದ್ರ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಕಾಸ್ಟಿಂಗ್ ಉದ್ಯಮದ ಇನ್ನಷ್ಟು ಅಭಿವೃದ್ಧಿಗೆ ಪ್ರೋತ್ಸಾಹ ನೀಡಲಾಗುವುದು’ ಎಂದು ಭರವಸೆ ಕೊಟ್ಟರು.
‘ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್‌ನವರು ಮಾಸಿಕ 200 ಯುನಿಟ್ ವಿದ್ಯುತ್ ಉಚಿತವಾಗಿ ಕೊಡುವುದಾಗಿ ಹೇಳುತ್ತದ್ದಾರೆ. ಡಿ.ಕೆ.ಶಿವಕುಮಾರ್ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾದರಿ ನಕಲಿಸುತ್ತಿದ್ದಾರೆಯೇ?’ ಎಂದು ಲೇವಡಿ ಮಾಡಿದರು.
‘2014ರ ಮೊದಲು ದೇಶದಾದ್ಯಂತ ವಿದ್ಯುತ್ ವ್ಯವಸ್ಥೆ ಹದಗೆಟ್ಟಿತ್ತು. ಈಗ ಉಚಿತ ವಿದ್ಯುತ್ ಆಶ್ವಾಸನೆ ಕೊಡುತ್ತಿದ್ದಾರೆ. ಇಂತಹ ಸುಳ್ಳು ಆಶ್ವಾಸನೆಗಳಿಂದ ದೇಶದ ಅಭಿವೃದ್ಧಿಯಾಗದು’ ಎಂದು ವ್ಯಂಗ್ಯವಾಡಿದರು.
ಶಾಸಕ ಅಭಯ ಪಾಟೀಲ, ರಕ್ಷಣಾ ಇಲಾಖೆ ಸುಪರ್ದಿಯಲ್ಲಿರುವ ರಾಜ್ಯ ಸರಕಾರದ 750 ಎಕರೆ ಜಾಗವನ್ನು ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರಿಸುವಂತೆ ಕೋರಿದರು.
ಬೆಳಗಾವಿ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಹೇಮೇಂದ್ರ ಪೋರವಾಲ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸದೆ ಮಂಗಲಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಮಹಾದೇವ ಚೌಗಲೆ ಇತರರಿದ್ದರು.
ReplyForward |
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ