Kannada NewsKarnataka NewsLatest

ಆರ್ ಸಿಯುಗೆ ಧನಸಹಾಯ ಆಯೋಗದ ಮನ್ನಣೆ ಕಳೆದುಕೊಳ್ಳುವ ಆತಂಕ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ತಜ್ಞರ ತಂಡವು ಭೇಟಿ ನೀಡಿ ವಿಶ್ವವಿದ್ಯಾಲಯದ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಪರಿಶೀಲನೆಯನ್ನು ನಡೆಸಿತು.

ವಿಶ್ರಾಂತ ಕುಲಪತಿಗಳಾದ ಪ್ರೊ. ಬಿ.ಎಸ್. ಶೇರಿಗಾರ ಇವರ ಅಧ್ಯಕ್ಷತೆಯಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಪಿ.ಎಸ್.ಹಿರೇಮಠ, ವರಂಗಲ್‌ನ ಕಾಕತೀಯ ವಿಶ್ವವಿದ್ಯಾಲಯದ ಪ್ರೊ.ವಿ.ವ್ಹಿ. ಸುಬ್ರಹ್ಮಣ್ಯ ಶರ್ಮಾ, ಬೆಂಗಳೂರು ವಿಶ್ವವಿದ್ಯಾಲಯದ ಪ್ರೊ. ಕೆ. ಈರೇಶಿ, ಗುಲ್ಬರ್ಗಾದ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ.ಎಸ್. ಚಂದ್ರಶೇಖರ, ಬೆಂಗಳೂರು ವಿಶ್ವವಿದ್ಯಾಲಯ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಪಿ.ಎಸ್.ಜಯರಾಮು ಅವರನ್ನೊಳಗೊಂಡ ಏಳು ಜನ ಪ್ರಾಧ್ಯಾಪಕರುಗಳ ತಂಡವು ವಿಶ್ವವಿದ್ಯಾಲಯದ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಪರಿಶೀಲನೆಯನ್ನು ನಡೆಸಿತು.

ಸಮಿತಿಯು ಮೂರು ದಿನಗಳ ಕಾಲ ನಡೆಸಿ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳು, ಕಚೇರಿಗಳು ಹಾಗೂ ಕೋಶಗಳಿಗೆ ಭೇಟಿ ನೀಡಿ ಪ್ರಗತಿಯನ್ನು ಪರಿಶೀಲಿಸಿತು. ಪ್ರಗತಿಯಲ್ಲಿ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಉತ್ತಮ ಗುಣಾಂಕಗಳನ್ನು ನೀಡುವುದರ ಮೂಲಕ ವಿಶ್ವವಿದ್ಯಾಲಯದ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಶ್ಲಾಘಿಸಿತು.

ವಿಶ್ವವಿದ್ಯಾಲಯದ ಬೋಧಕ ವರ್ಗದ ಎಲ್ಲ ಸಾಧನೆಗಳನ್ನು ಹಾಗೂ ವಿವಿಧ ಕೋಶಗಳು ಹಮ್ಮಿಕೊಂಡಿರುವ ಕಾರ್ಯಕ್ರಮಗಳು ತೃಪ್ತಿಕರವಾಗಿವೆ ಎಂದು ಅಭಿಪ್ರಾಯಪಟ್ಟಿತು. ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ, ಅಧಿಕಾರಿಗಳೊಡನೆ ಚರ್ಚೆ ನಡೆಸಿ ದತ್ತಾಂಶಗಳನ್ನು ಕ್ರೋಢೀಕರಿಸಿಕೊಂಡು ತೌಲನಿಕವಾಗಿ ಅಧ್ಯಯನಿಸಿ ವರದಿಯನ್ನು ಸಿದ್ಧಪಡಿಸಿ ಕುಲಪತಿಗಳಿಗೆ ಸಲ್ಲಿಸಿತು.

ವರದಿಯು ಎಲ್ಲ ರೀತಿಯಿಂದಲೂ ಸಕಾರಾತ್ಮಕವಾಗಿದ್ದು, ಮೂಲಭೂತ ಸೌಕರ್ಯಗಳ ವಿಷಯದಲ್ಲಿ ಸಮಿತಿಯು ತೃಪ್ತಿಯನ್ನು ಹೊಂದಿಲ್ಲವೆನ್ನುವ ಅಂಶವನ್ನು ವ್ಯಕ್ತಪಡಿಸಿತು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಶೈಕ್ಷಣಿಕವಾಗಿ ಉತ್ತಮ ಸಾಧನೆಯನ್ನು ಮಾಡಿದ್ದರೂ, ಜಮೀನಿಲ್ಲದ ಕಾರಣಕ್ಕಾಗಿ ಅಭಿವೃದ್ಧಿ ಕಾರ್ಯಗಳಲ್ಲಿ ಹಿಂದೆ ಬಿದ್ದಿದೆ ಎಂದು ಸಮಿತಿಯು ಅಭಿಪ್ರಾಯಪಟ್ಟಿತು.

ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರೂ ಕೂಡ ಸಹಕಾರ ನೀಡಬೇಕು ಎಂದು ತಿಳಿಸಿತು. ಜಮೀನು ಹಸ್ತಾಂತರವಾಗದಿದ್ದರೆ ಮೂಲಭೂತ ಅಭಿವೃದ್ದಿಯು ಸಾಧ್ಯವಾಗುವುದಿಲ್ಲ. ಶೈಕ್ಷಣಿಕ ಗುಣಮಟ್ಟವು ವಿಶ್ವವಿದ್ಯಾಲಯದ ಅಭಿವೃದ್ಧಿಯಲ್ಲಿ ಮಾನದಂಡವಾಗುತ್ತದೆ. ಆದರೆ ಮೂಲಭೂತ ಸೌಕರ್ಯವಿಲ್ಲದಿರುವ ಕಾರಣಕ್ಕೆ ಗುಣಮಟ್ಟವನ್ನು ತರುವ ಪ್ರಯತ್ನವು ವ್ಯರ್ಥವಾಗುತ್ತದೆ ಎಂದು ಸಮಿತಿಯು ಅಭಿಪ್ರಾಯಪಟ್ಟಿದೆ.

ಇದರಿಂದಾಗಿ ವಿಶ್ವವಿದ್ಯಾಲಯ ಧನಸಹಾಯ ಆಯೊಗವು ವಿಶ್ವವಿದ್ಯಾಲಯಕ್ಕೆ ನೀಡಿರುವ ೧೨ಬಿ ಹಾಗೂ ೨ಎಫ್ ಮನ್ನಣೆಯನ್ನು ಕಳೆದುಕೊಳ್ಳಬಹುದೆಂಬ ಕಳವಳಕಾರಿ ಅಂಶವನ್ನು ತನ್ನ ವರದಿಯಲ್ಲಿ ತಿಳಿಸಿರುತ್ತದೆ.

ಸಮಿತಿಯು ವರದಿಯನ್ನು ನೀಡುವಾಗ ಕುಲಸಚಿವರಾದ ಪ್ರೊ. ಬಸವರಾಜ ಪದ್ಮಶಾಲಿ, ಹಣಕಾಸು ಅಧಿಕಾರಿಗಳಾದ ಪ್ರೊ. ಡಿ.ಎನ್.ಪಾಟೀಲ, ಐ.ಕ್ಯೂ.ಎ.ಸಿ. ನಿರ್ದೇಶಕರಾದ ಪ್ರೊ. ಶಿವಾನಂದ ಗೊರನಾಳೆ, ಚಾಲನಾ ಸಮಿತಿಯು ನಿರ್ದೇಶಕರಾದ ಪ್ರೊ. ತಳವಾರ ಸಾಬಣ್ಣಾ ವಿವಿಧ ನಿಖಾಯಗಳ ಡೀನರುಗಳು ಹಾಗೂ ಎಲ್ಲ ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button