ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಹೊಸ ಪಿಂಚಣಿ ರದ್ದುಪಡಿಸಿ ಹಳೆಯ ಪಿಂಚಣಿ ಮರುಜಾರಿಗೊಳಿಸುವ ಸಂಬಂಧ ರಾಜ್ಯ ಸರಕಾರ ಶನಿವಾರ ಸಮಿತಿ ರಚನೆ ಮಾಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಎನ್ ಪಿಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ ತೇಜಾ, ಇದು ಎನ್ ಪಿಎಸ್ ನೌಕರರ ಪಾಲಿಗೆ ಕರಾಳ ದಿನ ಎಂದಿದ್ದಾರೆ.
ಈ ಕುರಿತು ಅವರು ವಿಡೀಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಎನ್ ಪಿ ಎಸ್ ರದ್ದುಪಡಿಸಿ ಒಪಿಎಸ್ ಜಾರಿಗೊಳಿಸಲಾಗಿರುವ ರಾಜಸ್ಥಾನ, ಹಿಮಾಚಲ, ಜಾರ್ಖಂಡ್, ಛತ್ತೀಸಗಡ ರಾಜ್ಯಗಳಲ್ಲಿ ಸಮಿತಿ ರಚನೆ ಮಾಡಿರಲಿಲ್ಲ. ಆದರೆ ಸಮಿತಿ ರಚನೆ ಮಾಡಿದಲ್ಲೆಲ್ಲೂ ಎನ್ ಪಿಎಸ್ ರದ್ದಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ.
ನಾನು 4 ಬಾರಿ ಮುಖ್ಯಮಂತ್ರಿಗಳ ಜೊತೆ ಸಭೆ ಮಾಡಿದ್ದೇವೆ. 3 ಬಾರಿ ಉಪಮುಖ್ಯಮಂತ್ರಿಗಳ ಜೊತೆ ಸಭೆ ಮಾಡಿದ್ದೇವೆ. ಅವರು, ನಮ್ಮ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ ಆರ್ಥಿಕ ಇಲಾಖೆ ಅಭಿಪ್ರಾಯ ಪಡೆದು ಒಪಿಎಸ್ ಜಾರಿಗೊಳಿಸುವುದಾಗಿ ತಿಳಿಸಿದ್ದರು. ಸಮಿತಿ ರಚಿಸುವ ಕುರಿತು ಹೇಳಿರಲಿಲ್ಲ. ಆದರೆ ಈಗ ಸಮಿತಿ ರಚನೆ ಮಾಡಿದ್ದಾರೆ. 2018ರಲ್ಲಿ ಮತ್ತು 2023ರಲ್ಲಿ ಈಗಾಗಲೆ ಸಮಿತಿ ರಚನೆ ಆಗಿತ್ತು. ಈಗ ಪುನಃ ಸಮಿತಿ ರಚನೆ ಅಗತ್ಯವಿರಲಿಲ್ಲ. ಸಮಿತಿ ರಚನೆಯಿಂದಾಗಿ ಎನ್ ಪಿಎಸ್ ಹೋರಾಟ ಹಿಂದಕ್ಕೆ ಹೋದಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಜುಮ್ ಫರವೇಜ್ ಅಧ್ಯಕ್ಷತೆಯಲ್ಲಿ ರಾಜ್ಯ ಸರಕಾರ ಹಳೆಯ ಪಿಂಚಣಿ ಯೋಜನೆ ಜಾರಿ ಸಂಬಂಧ ವರದಿ ನೀಡಲು ಶನಿವಾರ ಸಮಿತಿ ರಚನೆ ಮಾಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ