ಪ್ರಗತಿವಾಹಿನಿ ಸುದ್ದಿ: ಕೌಟುಂಬಿಕ ಕಲಹದಿಂದ ಆರಂಭವಾದ ಜಗಳ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜನವಾಡ ಗ್ರಾಮದಲ್ಲಿ ನಡೆದಿದೆ.
ಜನವಾಡ ಗ್ರಾಮದ ಸಿದ್ದು ಪೂಜಾರಿ ಕುಟುಂಬ ಹಾಗೂ ಆತನ ಪತ್ನಿಯ ಕುಟುಂಬಗಳ ನಡುವೆ ಗಲಟೆ ನಡೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಹೊಡೆದಾಟದಲ್ಲಿ ಸಿದ್ದು ಪೂಜಾರಿ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಆತನ ಕಿವಿ ಕಟ್ ಆಗಿದೆ. ತಲೆ ಹಾಗೂ ಬೆನ್ನಿಗೆ ತೀವ್ರವಾದ ಗಾಯಗಳಾಗಿವೆ.
ಕುಟುಂಬದವರು ತಕ್ಷಣ ಆತನನ್ನು ಸದಲಗಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದಾರೆ. ತಾಲೂಕು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಕೇಳಿದರೆ ಆಸ್ಪತ್ರೆ ವೈದ್ಯರು ನಿರ್ಲಕ್ಷ್ಯ ಮೆರೆದಿದ್ದಾರೆ. ಚಾಲಕ ಇಲ್ಲ, ನೀವೇ ಆಂಬುಲೆನ್ಸ್ ತೆಗೆದುಕೊಂಡುಹೋಗಿ ಎಂದಿದ್ದಾರೆ. ಇದರಿಂದ ನೊಂದ ಸಿದ್ದು ಪೂಜಾರಿ ಪುತ್ರ ಮಾಳು ಬೇರೆ ದಾರಿಯಿಲ್ಲದೇ ತಾನೇ ಆಂಬುಲೆನ್ಸ್ ಚಾಲನೆ ಮಾಡಿಕೊಂಡು ಸದಲಗಾದಿಂದ ಚಿಕ್ಕೋಡಿ ಆಸ್ಪತ್ರೆಗೆ ತಂದೆ ಸಿದ್ದು ಪೂಜಾರಿಯನ್ನು ದಾಖಲಿಸಿದ್ದಾರೆ. ಚಿಕ್ಕೋಡಿಯಲ್ಲಿ ಚಿಕಿತ್ಸೆ ಪಡೆದ ಬಳಿಕ ಗಾಯಾಳು ಸಿದ್ದು ಪೂಜಾರಿಯನ್ನು ಜಿಲ್ಲಾಸ್ಪತ್ರೆಗೆ ಶಿಫ್ಟ್ ದಾಖಲಿಸಲಾಗಿದೆ.
ಸದಲಗಾ ಆಸ್ಪತ್ರೆಯ ಬೇಜ್ವಾಬ್ದಾರಿ, ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ