*ಹಬ್ಬದ ದಿನವೇ ಬೆಂಕಿ ಅವಘಡ; ಮೀನುಗಾರಿಕಾ ಬೋಟ್ ಗಳು ಬೆಂಕಿಗಾಹುತಿ; 5-6 ಕೋಟಿ ನಷ್ಟ*
ಪ್ರಗತಿವಾಹಿನಿ ಸುದ್ದಿ; ಉಡುಪಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿಯೇ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ. ಲಂಗರು ಹಾಕಿದ್ದ ಮೀನುಗಾರಿಕಾ ಬೋಟ್ ಗಳು ಬೆಂಕಿಗಾಹುತಿಯಾಗಿರುವ ಘಟನೆ ಉಡುಪಿ ಜಿಲ್ಲೆಯ ಗಂಗೊಳ್ಳಿ ಬಂದರಿನಲ್ಲಿ ನಡೆದಿದೆ.
ದೀಪಾವಳಿ ಹಿನ್ನೆಲೆಯಲ್ಲಿ ಗಂಗೊಳ್ಳಿ ಬಂದರಿನಲ್ಲಿ ಬೋಟ್ ಗಳಿಗೆ ಪೂಜೆ ನೆರವೇರಿಸಲಾಗುತ್ತಿತ್ತು. ಈ ವೇಳೆ ಪಟಾಕಿ ಸಿಡಿಸಿದ್ದರಿಂದ ಪಟಾಕಿಯ ಕಿಡಿ ಬೋಟ್ ಗಳಿಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ.
ನೋಡನೋಡುತ್ತಿದ್ದಂತೆ ಹಲವು ಬೋಟ್ ಗಳು ಬೆಂಕಿಗಾಹುತಿಯಾಗಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.
ಗಂಗೊಳ್ಳಿ ಗ್ರಾಮದ ಮ್ಯಾಂಗನೀಸ್ ರೋಡ್ ನ ವಾರ್ಪ್ ನಲ್ಲಿ ಬೋಟ್ ಕಟ್ಟುವ ಹಾಗೂ ರಿಪೇರಿ ಮಾಡುವ ಸ್ಥಳದಲ್ಲಿ ರಿಪೇರಿಗೆ ನಿಲ್ಲಿಸಲಾಗಿದ್ದ ಬೋಟ್ ಗಳಲ್ಲಿ 8 ಪರ್ಷಿಯನ್ ಬೋಟ್ , 1 ಪಿಶಿಂಗ್ ಬೋಟ್, 1 ನಾಡ ದೋಣಿ, 1 ಡಿಂಗ್ರಿ(ಚಿಕ್ಕ ಬೋಟ್) , 8 ಜೊತೆ ಮಾಟುಬಲೆ, ಒಂದು ಬೋಟ್ ಕ್ಯಾಬಿನ್ ಹಾಗೂ 2 ಬೈಕ್ ಗಳು ಬೆಂಕಿ ತಗುಲಿ ಸುಟ್ಟು ಹೋಗಿವೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸಿದ್ದು, ಘಟನಾ ಸ್ಥಳದಲ್ಲಿ ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು , ವೃತ್ತ ನಿರೀಕ್ಷಕರು ಬೈಂದೂರು, ಮತ್ತು ಗಂಗೊಳ್ಳಿ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಕರಾವಳಿ ರಕ್ಷಣಾ ಪಡೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದು ಸೂಕ್ತ ನಿಗಾ ವಹಿಸಿದ್ದಾರೆ.
ಘಟನೆಯಲ್ಲಿ ಅಂದಾಜು 5 ರಿಂದ 6 ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಬೋಟ್ ಗಳಿಗೆ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು, ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಿದ್ದಾರೆ. ಮೀನುಗಾರಿಕಾ ಹಾಗೂ ಬಂದರು ಸಚಿವ ಮಂಕಾಳು ವೈದ್ಯ ಅವರೊಂದಿಗೂ ಮಾತನಾಡಿದ್ದಾರೆ.
ಕೆಲ ಹೊತ್ತಲ್ಲಿ ಮೀನುಗಾರಿಕಾ ಹಾಗೂ ಬಂದರು ಸಚಿವ ಮಂಕಾಳು ವೈದ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ