Kannada NewsKarnataka NewsLatest

ಬಸವಪ್ರಭು ಹಾಗೂ ಶಾರದಾದೇವಿ ಕೋರೆ ಪುತ್ಥಳಿ ಅನಾವರಣ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಅಂಕಲಿ ಗ್ರಾಮದಲ್ಲಿರುವ ಕೆಎಲ್ಇ  ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನ. 15 ರಂದು ಮುಂಜಾನೆ 11 ಗಂಟೆಗೆ  ಬಸವಪ್ರಭು ಕೋರೆ ಹಾಗೂ ಶಾರದಾದೇವಿ ಕೋರೆ ಪ್ರತಿಮೆಗಳ ಅನಾವರಣ ಸಮಾರಂಭ ಆಯೋಜಿಸಲಾಗಿದೆ  ಎಂದು ಕೆಎಲ್ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷರು ಹಾಗೂ ಸಂಸದರಾದ ಡಾ ಪ್ರಭಾಕರ ಕೋರೆ ಇವರು ತಿಳಿಸಿದರು.
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಶಿಕ್ಷಣ ಪ್ರೇಮಿಗಳೂ, ಸ್ವಾತಂತ್ರ್ಯ  ಯೋಧರೂ ಆಗಿದ್ದ  ಲಿಂ ಬಸವಪ್ರಭು ಶಿವಲಿಂಗಪ್ಪ ಕೋರೆ ಹಾಗೂ ಲಿಂ  ಶಾರದಾದೇವಿ ಬಸವಪ್ರಭು ಕೋರೆ ದಂಪತಿಗಳು ದೇಶ ಸೇವೆಯೇ ಈಶ ಸೇವೆ ಎಂಬ  ಸಂಕಲ್ಪದೊಂದಿಗೆ ಸಾರ್ಥಕವಾಗಿ ಬದುಕಿದವರು. ತಮ್ಮ ಬದುಕಿನುದ್ದಕ್ಕೂ ದೀನ ದಲಿತರು ಹಾಗೂ ಬಡವರ ಏಳಿಗಾಗಿ ಹಗಲಿರುಳು ಶ್ರಮಿಸಿದವರು.  ಆದ್ದರಿಂದ ಸಮಾಜಕ್ಕೆ ಆದರ್ಶ ಪ್ರಾಯವಾದ ಮಹನೀಯರ ಶೈಕ್ಷಣಿಕ ಸಾಮಾಜಿಕ ಧಾರ್ಮಿಕ ಸೇವೆಗಳನ್ನು ಚಿರಸ್ಥಾಯಿಗೊಳಿಸಲು ಅವರ ಪ್ರತಿಮೆ ಸ್ಥಾಪಿಸಲಾಗುವುದು ಎಂದರು.
ಈ ಸಮಾರಂಭದಲ್ಲಿ ಕೆಎಲ್ಇ ಸಿಬಿಎಸ್ಇ ಶಾಲೆಗೆ ಕೆಎಲ್ಇ ಬಸವಪ್ರಭು ಕೋರೆ ಸಿಬಿಎಸ್ಇ ಶಾಲೆ ಎಂದು ನಾಮಕರಣ, ಕೆಎಲ್ಇ ಸಂಸ್ಕೃತಿ ಪೂರ್ವ ಪ್ರಾಥಮಿಕ ಶಾಲೆಯ ಉದ್ಘಾಟನೆ ಹಾಗೂ ಕೆಎಲ್ಇ  ಶಾರದಾದೇವಿ ಕೋರೆ ಪ್ರೌಢಶಾಲೆಯ ಗ್ರಂಥಾಲಯಕ್ಕೆ ಭಾಗಪ್ಪ ಲಕ್ಷ್ಮಣ್ ಉಮರಾಣಿ ನಾಮಕರಣ  ಮಾಡಲಾಗುವುದು ಎಂದು ಅವರು ಹೇಳಿದರು.
ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಸುತ್ತೂರು ಮಠ ಮೈಸೂರು , ಶ್ರೀಶೈಲ ಪೀಠದ ಜಗದ್ಗುರು  ಹಾಗೂ  ಯಡೂರಿನ  ಕಾಡಸಿದ್ಧೇಶ್ವರ ಸಂಸ್ಥಾನಮಠ ಮತ್ತು ವೀರಭದ್ರ ದೇವಸ್ಥಾನದ ಧರ್ಮಾಧಿಕಾರಿಗಳಾದ   ಶ್ರೀ ಡಾ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಗಳು, ವಿಜಾಪುರ ಜ್ಞಾನ ಯೋಗಾಶ್ರಮದ  ಶ್ರೀ ಸಿದ್ಧೇಶ್ವರ ಮಹಾಸ್ವಾಮೀಜಿಗಳು, ನಿಡಸೋಸಿ ಸಿದ್ಧ ಸಂಸ್ಥಾನ ಮಠದ ತ್ರಿವಿಧ ದಾಸೋಹಿ   ಪಂಚಮ ಶಿವಲಿಂಗೇಶ್ವರ ಮಹಾಸ್ವಾಮೀಜಿಗಳು, ಚಿಂಚಣಿಯ ಸಿದ್ದಸಂಸ್ಥಾನ ಮಠದ  ಅಲ್ಲಮಪ್ರಭು ಮಹಾಸ್ವಾಮೀಜಿಗಳು, ಚಿಕ್ಕೋಡಿಯ ಸಂಪಾದನಾ ಚರಮೂರ್ತಿ ಮಠದ  ಸಂಪಾದನಾ ಮಹಾ ಸ್ವಾಮೀಜಿಗಳು ವಹಿಸಲಿದ್ದಾರೆ ಎಂದು ಡಾ ಪ್ರಭಾಕರ ಕೋರೆ ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button