Latest

ಜಿಲ್ಲಾಧಿಕಾರಿ ಮುಗಿಲನ್ ನಡೆ ಹಳ್ಳಿಗಳ ಕಡೆ

ಪ್ರಗತಿವಾಹಿನಿ ಸುದ್ದಿ; ಕಾರವಾರ: ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾಗುತ್ತಿರುವ ಅರಣ್ಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿಗಾಗಿ ಪ್ರತಿ ತಿಂಗಳಿಗೊಮ್ಮೆ ಎಲ್ಲ ಇಲಾಖೆಗಳ ಅಧಿಕಾರಿಗಳ ಸಮನ್ವಯ ಸಭೆ(ಕೋಆರ್ಡಿನೆಷನ್ ಮಿಟಿಂಗ್) ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಹೇಳಿದರು.

ಜೋಯಿಡಾ ತಾಲೂಕಿನ ನಂದಿಗದ್ದೆ ಗ್ರಾಮದಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ’ ಗ್ರಾಮ ವಾಸ್ತವ್ಯದಲ್ಲಿ ಮಾತನಾಡಿದ ಅವರು, ಸರಕಾರದ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಮಂಜೂರಾದ ಕಾಮಗಾರಿಗಳು ಪ್ರಾರಂಭವಾಗಿ ಮೊದಲ ಹಂತದ ಹಣವೂ ಸಹ ಬಿಡುಗಡೆಯಾಗಿರುತ್ತದೆ. ಆದರೆ ಅರಣ್ಯ ಇಲಾಖೆ ಕಾಯ್ದೆ ಅಡೆತಡೆಗಳಿಂದ ಕೆಲಸ ಕಾರ್ಯಗಳು ಅರ್ಧಕ್ಕೆ ಸ್ಥಗಿತವಾಗಿರುವ ಕುರಿತಾದ ಅರ್ಜಿಗಳೇ ಹೆಚ್ಚು ಬರುತ್ತಿವೆ. ಇಂತಹ ಅರ್ಜಿಗಳನ್ನು ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳ ಪರಸ್ಪರ ಸಮನ್ವಯತೆ ಮೂಲಕ ಇತ್ಯರ್ಥಪಡಿಸಲು ಸಾಧ್ಯವಿದೆ. ಹೀಗಾಗಿ ಜಿಲ್ಲಾ ಹಾಗೂ ತಾಲೂಕಾ ಹಂತದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಮನ್ವಯ ಸಭೆ ನಡೆಸಲು ಆದಷ್ಟು ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸರಕಾರದ ಆದೇಶದಂತೆ ಜಿಲ್ಲೆಯಲ್ಲಿ ನಡೆಸುತ್ತಿರುವ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಎಂಬ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಸಾರ್ವಜನಿಕರ ಸಾಕಷ್ಟು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ದೊರೆಯುತ್ತಿದೆ. ಆದ್ದರಿಂದ ಗ್ರಾಮೀಣ ಭಾಗದ ಪ್ರತಿಯೊಬ್ಬ ನಾಗರಿಕರೂ ಗ್ರಾಮ ವಾಸ್ತವ್ಯದ ಸಂಪೂರ್ಣ ಸದುಪಯೋಗವನ್ನು ಪಡೆದುಕೊಳ್ಳಬೇಕು. ಆಡಳಿತ ಎನ್ನುವಂತದ್ದು ಸಾರ್ಜನಿಕರ ಮನೆ ಬಾಗಿಲಿಗೇ ಹೋಗಿ ತಲುಪಬೇಕು. ಜನರ ಕುಂದು ಕೊರತೆ ಹಾಗೂ ವಿವಿಧ ಯೋಜನೆಗಳಡಿ ಸರಕಾರದಿಂದ ದೊರಕುವಂತ ಸೌಲಭ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲ ಅಧಿಕಾರಿಗಳು ಹಳ್ಳಿಯತ್ತ ಬಂದು ಪೂರ್ತಿ ಒಂದು ದಿನ ಜನರ ಮಧ್ಯದಲ್ಲಿದ್ದು ಸರಿಯಾಗಿ ಸ್ಪಂದಿಸಬೇಕು ಎಂಬುವುದು ಗ್ರಾಮ ವಾಸ್ತವ್ಯದ ಪ್ರಮುಖ ಉದ್ದೇಶವಾಗಿದೆ ಎಂದರು.

ಈ ಹಿಂದೆ ಭಟ್ಕಳ ತಾಲೂಕಿನ ಹಾಡುವಳ್ಳಿಯಲ್ಲಿ ನಡೆದ ಗ್ರಾಮ ವಾಸ್ತವದಲ್ಲಿ ಸಾರ್ವಜನಿಕರಿಂದ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಒಟ್ಟು 163 ಅರ್ಜಿಗಳು ಸಲ್ಲಿಕೆಯಾಗಿದ್ದವು. ಆ ಪೈಕಿ 158 ಅರ್ಜಿಗಳನ್ನು ಆ ದಿನ ಸ್ಥಳದಲ್ಲಿಯೇ ಇತ್ಯರ್ಥಪಡಿಸಲಾಗಿದ್ದು, ಬಾಕಿ ಉಳಿದ 5 ಅರ್ಜಿಗಳ ಇತ್ಯರ್ಥಕ್ಕಿರುವ ತೊಂದರೆಗಳ ಬಗ್ಗೆಯೂ ಅರ್ಜಿದಾರರಿಗೆ ತಿಳಿಸಲಾಗಿದೆ. ನೋಟಿಸ್ ನೀಡಿ ಕೆಲ ಸಮಯದ ನಂತರ ಬಗೆಹರಿಸಬೇಕಾದ ಕೆಲವು ಅರ್ಜಿಗಳನ್ನ ಇತ್ಯರ್ಥಪಡಿಸಿದ್ದು, ಅಧಿಕಾರಿಗಳು ಸಹ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಈ ಹಿಂದೆ ಹಳ್ಳಿಗಳಿಗೆ ಉನ್ನತ ಮಟ್ಟದ ಅಧಿಕಾರಿಗಳು ಹೋದರೆ ವಯಸ್ಸಾದವರು ಮಾತ್ರ ಕಾಣಸಿಗುತ್ತಾರೆ ಎಂಬ ಮಾತುಗಳು ಕೇಳಿಸುತ್ತಿದ್ದವು. ಆದರೆ ಅದನ್ನು ಬದಲಾಯಿಸುವ ನಿಟ್ಟಿನಲ್ಲಿ ಇಂದಿನ ಗ್ರಾಮ ವಾಸ್ತವ್ಯಕ್ಕೆ ಎಲ್ಲ ವಯೋಮಾನದವರೂ ತಮ್ಮ ಸಮಸ್ಯೆಗಳ ನಿವಾರಣೆಗಾಗಿ ಆಗಮಿಸಿದ್ದಾರೆ. ಇದು ಅತ್ಯಂತ ಸಂತಸದ ಸಂಗತಿಯಾಗಿದೆ. ಇದೇ ರೀತಿಯಲ್ಲಿ ಗ್ರಾಮೀಣ ಭಾಗದ ಜನರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಪೂರ್ಣ ಸದುಪಯೋಗ ಪಡೆಯಬೇಕು ಎಂದರು.
ಜನರ ಸಮಸ್ಯೆಗಳೆನು, ಜನರ ಅರ್ಜಿಗಳನ್ನ ಸ್ಥಳದಲ್ಲಿಯೇ ಪರಿಹರಿಸಲು ಸಾದ್ಯನಾ ಎಂಬುದರ ಕುರಿತು ಕೂಲಂಕುಷವಾಗಿ ಪರಿಶೀಲಿಸಿ ಸಮಸ್ಯೆಗಳ ನಿವಾರಣೆಗೆ ಶ್ರಮಿಸಲಾಗುವುದು ಎಂದರು.

ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪಶು ವೈದ್ಯಕೀಯ, ಪಿಡಬ್ಲ್ಯುಡಿ, ಕುಡಿಯುವ ನೀರು, ಪಿಂಚಣಿ, ಅರಣ್ಯ, ಕೃಷಿ, ವಸತಿ ಯೋಜನೆ, ಕೆಎಸ್‍ಆರ್‍ಟಿಸಿ ಹಾಗೂ ವಿದ್ಯುತ್ ಸೇರಿದಂತೆ ವಿವಿಧ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಒಳಗೊಂಡ 79 ಅರ್ಜಿಗಳನ್ನು ಗ್ರಾಮಸ್ಥರು ಜಿಲ್ಲಾಧಿಕಾರಿಗೆ ನೀಡಿ ತಮ್ಮ ಅಳಲನ್ನು ತೋಡಿಕೊಂಡರು.

ನಂತರದಲ್ಲಿ ಜಿಲ್ಲಾಧಿಕಾರಿಯವರು ಚುನಾವಣಾ ಆಯೋಗದಿಂದ ನೀಡಿದ ಮತದಾರರ ಗುರಿತಿನ ಚೀಟಿಯನ್ನು ಯುವ ಮತದಾರರಿಗೆ, ವಿಕಲಚೇತನ ಸಬಲೀಕರಣ ಇಲಾಖೆಯಿಂದ ನೀಡುವಂತ ಬೈಸಿಕಲ್‍ನ್ನು ವಿಶೇಷಚೇತನರಿಗೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿಗಳ ಸುತ್ತಮುತ್ತ ಕೈತೋಟ ಬೆಳೆಸಲು ಪೂರಕವಾಗುವಂತೆ ವಿವಿಧ ತರಕಾರಿ ಬೀಜ ಹಾಗೂ ಹಣ್ಣಿನ ಗಿಡಗಳನ್ನು ಅಂಗನವಾಡಿ ಕಾರ್ಯಕರ್ತರಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಕಾರವಾರ ತಾಲೂಕಿನ ಸಹಾಯಕ ಆಯುಕ್ತೆ ವಿದ್ಯಾಶ್ರೀ ಚಂದರಗಿ, ಜೋಯಿಡಾ ತಹಶಿಲ್ದಾರ್ ಸಂಜಯ್ ಕಾಂಬಳೆ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಜಿ. ಪದ್ಮಾವತಿ, ತಾಲೂಕು ಪಂಚಾಯತ್ ಇಒ ಆನಂದ ಬಡಕುಂದ್ರಿ, ಎಸಿಎಫ್ ಕೆ.ಎಸ್. ಕೊರವರ, ತಾಲೂಕಾ ಆರೋಗ್ಯಾಧಿಕಾರಿ ಸುಜಾತಾ, ನಂದಿಗದ್ದೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮನಾ ಹರಿಜನ್, ಪಿಡಿಒ ಎನ್. ನಟರಾಜ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button