*ಸೆ.26ರಂದು ವಿಟಿಯು 26ನೇ ವಾರ್ಷಿಕ ಘಟಿಕೋತ್ಸವ: 52,025 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) 26ನೇ ವಾರ್ಷಿಕ ಘಟಿಕೋತ್ಸವ ಸೆಪ್ಟೆಂಬರ್ 26ರಂದು ಬೆಳಿಗ್ಗೆ 11 ಗಂಟೆಗೆ ಜ್ಞಾನ ಸಂಗಮ ಆವರಣದಲ್ಲಿ ನಡೆಯಲಿದೆ ಎಂದು ವಿಟಿಯು ಕುಲಪತಿ ಪ್ರೊ. ಎಸ್. ವಿದ್ಯಾಶಂಕರ ತಿಳಿಸಿದ್ದಾರೆ.
ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟಿಕೋತ್ಸವದ ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ವಹಿಸಲಿದ್ದು, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಬಾರಿ ಒಟ್ಟು 57,697 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 52,025 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಬಿ.ಇ./ಬಿ.ಟೆಕ್ ವಿಭಾಗದ 51,421, ಬಿ.ಆರ್ಕ್‌ನ 586, ಬಿ.ಪ್ಲಾನ್‌ನ 12 ಹಾಗೂ ಬಿ.ಎಸ್ಸಿ. ಆನರ್ಸ್ ವಿದ್ಯಾರ್ಥಿಗಳು ಸೇರಿದ್ದಾರೆ.
ಮೂವರಿಗೆ ಗೌರವ ಡಾಕ್ಟರೇಟ್
ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ. ಸಿಎಂಆರ್ ಜ್ಞಾನಧಾರ ಟ್ರಸ್ಟ್ ಅಧ್ಯಕ್ಷೆ ಡಾ. ಸಬಿತಾ ರಾಮಮೂರ್ತಿ, ಆರ್.ವಿ. ಶಿಕ್ಷಣ ಸಮಿತಿ ಟ್ರಸ್ಟ್ ಅಧ್ಯಕ್ಷ ಡಾ. ಎಂ.ಪಿ. ಶ್ಯಾಮ್ ಹಾಗೂ ಎಐಸಿಟಿಇ ಅಧ್ಯಕ್ಷ ಪ್ರೊ. ಟಿ.ಜಿ. ಸೀತಾರಾಂ ಅವರು ಗೌರವ ಡಾಕ್ಟರೇಟ್ ಸ್ವೀಕರಿಸಲಿದ್ದಾರೆ.
ಪದವಿ ಪಡೆಯಲು ಅರ್ಹರಾಗಿರುವ 52,025 ವಿದ್ಯಾರ್ಥಿಗಳ ಪೈಕಿ 27,437 ಬಾಲಕರು ಹಾಗೂ 24,583 ಬಾಲಕಿಯರಿದ್ದಾರೆ. ಬಾಲಕರ ಉತ್ತೀರ್ಣ ಪ್ರಮಾಣ ಶೇ.85.56ರಷ್ಟಿದ್ದರೆ, ಬಾಲಕಿಯರ ಉತ್ತೀರ್ಣ ಪ್ರಮಾಣ ಶೇ.95.83ರಷ್ಟಿದೆ. ಹೀಗಾಗಿ ಈ ಬಾರಿಯೂ ಬಾಲಕಿಯರು ಉತ್ತೀರ್ಣ ಪ್ರಮಾಣದಲ್ಲಿ ಮುನ್ನಡೆ ಸಾಧಿಸಿದ್ದಾರೆ ಎಂದು ಕುಲಪತಿ ತಿಳಿಸಿದರು.
94 ಚಿನ್ನದ ಪದಕ ಪ್ರದಾನ
ಈ ಬಾರಿ 38 ವಿದ್ಯಾರ್ಥಿಗಳಿಗೆ ವಿಟಿಯು ಚಿನ್ನದ ಪದಕ ಹಾಗೂ 56 ದತ್ತಿ ನಿಧಿಯ ಚಿನ್ನದ ಪದಕ ಸೇರಿದಂತೆ ಒಟ್ಟು 94 ಚಿನ್ನದ ಪದಕಗಳನ್ನು 45 ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಗುತ್ತದೆ. ಇದರೊಂದಿಗೆ 300 ವಿದ್ಯಾರ್ಥಿಗಳು ರ್ಯಾಂಕ್ ಪಡೆದಿದ್ದಾರೆ.
ವಿಶ್ವನಾಥ್‌ಗೆ 12 ಚಿನ್ನದ ಪದಕ
ದಾವಣಗೆರೆಯ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಚ್.ಎಂ. ವಿಶ್ವನಾಥ್ 12 ಚಿನ್ನದ ಪದಕಗಳನ್ನು ಪಡೆದು ಅತಿ ಹೆಚ್ಚು ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿಯಾಗಿದ್ದಾರೆ.
ನಿಪ್ಪಾಣಿಯ ವಿಎಸ್‌ಎಂ ಸೋಮಶೇಖರ್ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದ ಸಾಕ್ಷಿ ಎಸ್. ಹಡಲಗೆ 8 ಚಿನ್ನದ ಪದಕ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.
ಬೆಂಗಳೂರಿನ ಸಿಎಂಆರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಚಿನ್ಮಯಿ ಎಂ. ಕಶ್ಯಪ್ ಹಾಗೂ ಶಿವಮೊಗ್ಗದ ಜೆಎನ್‌ಎನ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಬಿ.ಎಂ. ಧನ್ಯಶ್ರೀ ತಲಾ 7 ಚಿನ್ನದ ಪದಕ ಪಡೆದು ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ. ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎ.ಸಿ. ಕವಿನಾ 6 ಚಿನ್ನದ ಪದಕ ಪಡೆದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಿಟಿಯು ಕುಲಸಚಿವರಾದ (ಮೌಲ್ಯಮಾಪನ) ಪ್ರೊ. ಯು.ಜೆ. ಉಜ್ವಲ್ ಹಾಗೂ ಕುಲಸಚಿವ (ಆಡಳಿತ) ಪ್ರಸಾದ ಬಿ. ರಾಂಪುರ ಉಪಸ್ಥಿತರಿದ್ದರು.



