Latest

ಶ್ರೀರಾಮುಲು ಮೇಲೆ ಮುನಿಸಿಕೊಂಡಳೇ ದುರ್ಗಾದೇವಿ?

ಪತ್ರ ಬರೆದು ತಿಂಗಳೊಳಗೆ ಇದ್ದದ್ದನ್ನೂ ಕಳೆದುಕೊಂಡ ಸಚಿವ

 

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು -: ಆರೋಗ್ಯ ಸಚಿವ ಶ್ರೀರಾಮುಲು ’ತನ್ನನ್ನು ರಾಜ್ಯದ ಉಪಮುಖ್ಯಮಂತ್ರಿಯನ್ನಾಗಿ ಮಾಡು’ ಎಂದು ವಡಗೇರಾ ಗೋನಾಲ ಗಡೇ ದುರ್ಗಾದೇವಿಗೆ ಕಳೆದ ಸೆ.17ರಂದು ಪತ್ರ ಬರೆದಿದ್ದರು.

ಅದಾಗಿ ಇನ್ನೂ ಒಂದು ತಿಂಗಳಾಗಲಿಲ್ಲ. ಉಪಮುಖ್ಯಮಂತ್ರಿ ಹುದ್ದೆ ಇರಲಿ, ಇದ್ದ ಆರೋಗ್ಯ ಖಾತೆಯೂ ಕೈತಪ್ಪಿ ಹೋಯಿತು.

ಈ ಹಿಂದೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಕೂಡ ತಾವು ಕೆಪಿಸಿಸಿ ಅಧ್ಯಕ್ಷರಾಗಬೇಕು ಎಂದು ಗಡೇ ದುರ್ಗಾದೇವಿಗೆ ಪತ್ರ ಬರೆದಿದ್ದರು. ಅದರಂತೆ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಹಾಗಾಗಿ ನೀವೂ ಬೇಡಿಕೊಳ್ಳಿ ಎಂದು ಸ್ನೇಹಿತರು ಶ್ರೀರಾಮುಲುಗೆ ಹೇಳಿದ್ದರಂತೆ.

ಹಾಗಾಗಿ, ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮಕ್ಕಾಗಿ ಯಾದಗಿರಿ ಜಿಲ್ಲೆಗೆ ಆಗಮಿಸಿದ್ದ ಸಚಿವ ಶ್ರೀರಾಮುಲು, ಗೋನಾಲ ಗಡೇ ದುರ್ಗಾದೇವಿ ದರ್ಶನ ಪಡೆದರು. ಈ ವೇಳೆ ತನ್ನನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಇಂಗ್ಲೀಷಿನಲ್ಲಿ ಪತ್ರ ಬರೆದಿದ್ದು, ಪೂಜಾರಿ ಮಾರ್ಗದರ್ಶನದಂತೆ ಗರ್ಭಗುಡಿಯೊಳಗೆ ತೆರಳಿ ತಮ್ಮ ಪತ್ರವನ್ನು ದೇವಿಯ ಪಾದದ ಬಳಿ ಇಟ್ಟಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, ನನ್ನ ಮನಸ್ಸಿನಲ್ಲಿರುವುದನ್ನು ನಾನು ದೇವರ ಮುಂದೆ ಪ್ರಾರ್ಥಿಸಿ ಪತ್ರದಲ್ಲಿ ಬರೆದಿದ್ದೇನೆ. ಮನಸ್ಸಿನಲ್ಲಿ ಹೇಳುವುದು, ಪತ್ರದಲ್ಲಿ ಬರೆಯುವುದೆಲ್ಲವೂ ಒಂದೇ ಇರುತ್ತದೆ. ನನ್ನನ್ನು ಡಿಸಿಎಂ ಮಾಡುವುದು ಬಿಡುವುದು ಸಿಎಂ ವಿವೇಚನೆಗೆ ಬಿಟ್ಟದ್ದು ಎಂದು ಹೇಳಿದ್ದರು.

ಇದಾಗಿ ಇನ್ನೂ ಒಂದು ತಿಂಗಳಾಗಲಿಲ್ಲ. ಶ್ರೀರಾಮುಲು ಬಳಿ ಇದ್ದ ಆರೋಗ್ಯ ಇಲಾಖೆಯನ್ನು ಕಿತ್ತುಕೊಂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅದನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಕೈಗೆ ಕೊಟ್ಟರು. ಜೊತೆಗೆ ಶ್ರೀರಾಮುಲು ಬಳಿ ಇದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯನ್ನೂ ಕಿತ್ತುಕೊಂಡು ಸಿಎಂ ತಾವೇ ಇಟ್ಟುಕೊಂಡರು. ಶ್ರೀರಾಮುಲುಗೆ ಸಮಾಜ ಕಲ್ಯಾಣ ಇಲಾಖೆಯನ್ನು ಮಾತ್ರ ನೀಡಿದರು.

ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆ ಒಟ್ಟೊಟ್ಟಿಗೇ ಇದ್ದರೆ ಅನುಕೂಲ ಎಂದು ಎರಡನ್ನೂ ಸುಧಾಕರ್ ಗೆ ಕೊಟ್ಟಿದ್ದಾಗಿ ಸಮರ್ಥಿಸಿಕೊಳ್ಳಲಾಗುತ್ತಿದೆ. ಹಾಗಾದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮ್ತತು ಸಮಾಜ ಕಲ್ಯಾಣ ಇಲಾಖೆ ಒಟ್ಟೊಟ್ಟಿಗೆ ಇರುವುದು ಸಮಂಜಸವಲ್ಲವೇ?

ಏನೇ ಇರಲಿ, ದುರ್ಗಾದೇವಿ ಭೇಟಿ ವೇಳೆ ಇದ್ದ ಎರಡೂ ಖಾತೆಗಳನ್ನೂ ಸಚಿವ ಶ್ರೀಮರಾಮುಲು ಕಳೆದುಕೊಂಡರು. ದೇವಿ ಅವರ ಮೇಲೆ ಮುನಿಸಿಕೊಂಡಳೇ ಎಂದು ಜನರು ಆಡಿಕೊಳ್ಳುವಂತಾಗಿದೆ. ದೇವಿಯ ಮೇಲೆ ಜನರಿಟ್ಟಿದ್ದ ನಂಬಿಕೆಯೇ ಹುಸಿಯಾಯಿತೆ?

ಮುಂದಿನ ದಿನಗಳಲ್ಲಿ ಇದು ಯಾವ ರೀತಿಯ ತಿರುವು ಪಡೆಯುತ್ತದೆ? ದೇವಿ ಕಣ್ತೆರೆದು ಉಪಮುಖ್ಯಮಂತ್ರಿ ಹುದ್ದೆ ಕರುಣಿಸುತ್ತಾಳಾ? ತನ್ನ ಮೇಲೆ ಭಕ್ತರು ಇಟ್ಟಿರುವ ನಂಬಿಕೆಯನ್ನು ದುರ್ಗಾದೇವಿ ಉಳಿಸಿಕೊಳ್ಳುತ್ತಾಳಾ? ಕಾದು ನೋಡಬೇಕಿದೆ.

 

ಡಿಸಿಎಂ ಮಾಡೆಂದು ದುರ್ಗಾದೇವಿಗೆ ಪತ್ರ ಬರೆದ ಆರೋಗ್ಯ ಸಚಿವ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button