ಪ್ರಗತಿವಾಹಿನಿ ಸುದ್ದಿ: ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ನೂರು ಕೋಟಿ ಆಫರ್ ಆರೋಪ ಮಾಡಿರುವ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ವಿರುದ್ಧ ಕಿಡಿಕಾರಿರುವ ಸಚಿವ ಪ್ರಿಯಾಂಕ್ ಖರ್ಗೆ, ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ದಾರಿ ತಪ್ಪಿಸಲು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗೊಷ್ಠಿ ನಡೆಸಿ ಮಾತನಾಡಿದ ಅವರು, ಯಾವುದೇ ಸಾಕ್ಷಿ ಇಲ್ಲದೇ ಮುಖ್ಯಮಂತ್ರಿಗಳ ಮೇಲೆ ಹಾಗೂ ಉಪಮುಖ್ಯಮಂತ್ರಿಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಪ್ರಜ್ವಲ್ ಪ್ರಕರಣ ಹೊರತು ಪಡಿಸಿ ಲೋಕಲ್ ಪಾಲಿಟಿಕ್ಸ್ ಬಗ್ಗೆ ಹೆಚ್ಚು ಗಮನ ಕೋಡುತ್ತಿದ್ದಾರೆ. ಬಿಜೆಪಿ ಅವರು ಸುತ್ತಿ ಬಳಸಿ ಮಾತಾಡೋದನ್ನು ನಿಲ್ಲಿಸಬೇಕು ಎಂದರು.
ಭೀಕರವಾದ ಬರವನ್ನು ಎದುರಿಸುತ್ತಿದ್ದೇವೆ, ಅವರು ಉಲ್ಲೇಖಿಸಿದ ನಾಲ್ವರು ಸಚಿವರಿಗೆ ಬೇರೆ ಕೆಲಸ ಇಲ್ವಾ? ಇದನ್ನೆಲ್ಲಾ ನಿರ್ದೇಶನ ಮಾಡುತ್ತಿರುವುದು ಅಮಿತ್ ಶಾ ಎಂದು ಅವರೇ ಹೇಳಿದ್ದರು. ಹೀಗಿರುವಾಗ ಅಮಿತ್ ಶಾ ಅವರೇ ದೇವರಾಜೇಗೌಡರ ಬಾಯಿಯಿಂದ ಈ ಮಾತನ್ನು ಹೇಳಿಸಿರುವ ಸಾಧ್ಯತೆ ಇಲ್ಲ ಎಂದು ಹೇಗೆ ಹೇಳಲು ಸಾಧ್ಯ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಎಸ್‌ಐಟಿ ಒಂದು ಸರ್ಕಾರಿ ಸಂಸ್ಥೆ, ಸಿಬಿಐನಿಂದ ಮಾತ್ರ ನ್ಯಾಯ ಸಿಗುತ್ತದೆ ಎನ್ನುವುದು ತಪ್ಪಲ್ಲವೇ, ಅಮಿತ್ ಶಾ ಜೊತೆ ನೇರ ಸಂಪರ್ಕದಲ್ಲಿ ಅವರಿದ್ದಾರಲ್ಲವೇ, ನೂರು ಕೋಟಿ ಆಫರ್ ಬಗ್ಗೆ ಅವರಿಗೆ ತಿಳಿಸಬೇಕಾಗಿತ್ತು. ನೂರು ಕೋಟಿ ಏನು ಹುಡುಗಾಟವಲ್ಲ, ಅಮಿತ್ ಶಾ ಅವರಿಗೆ ಈ ರೀತಿ ಆಫರ್ ಇದೆ, ಇಡಿ ಅಥವಾ ಐಟಿ ದಾಳಿ ನಡೆಸಿ ಎಂದು ಮನವಿ ಮಾಡಬೇಕಾಗಿತ್ತು. ಬಿಜೆಪಿ ಅಥವಾ ಜೆಡಿಎಸ್ ಅವರಿಗೆ ಇದು ಬರೀ ರಾಜಕೀಯ. ಕುಟುಂಬಕ್ಕೆ ಅಂಟಿರುವ ಕಳಂಕವನ್ನು ದೂರ ಮಾಡಬೇಕು ಎಂದು ಅವರಿಗಿಲ್ಲ ಎಂದು ಪರೋಕ್ಷವಾಗಿ ದೇವೇಗೌಡರ ಕುಟುಂಬದ ವಿರುದ್ದ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ