ಪ್ರಗತಿವಾಹಿನಿ ಸುದ್ದಿ, ಕಾರವಾರ : ಕರ್ನಾಟಕ ರಾಜ್ಯದ ನೆರೆಯ ರಾಜ್ಯವಾದ ಕೇರಳದಲ್ಲಿ ಈಗಾಗಲೇ ಝೀಕಾ ವೈರಸ್ ಸೋಂಕಿನ ಪ್ರಕರಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲೂ ಈ ಸೋಂಕಿನ ಬಗ್ಗೆ ಎಲ್ಲಾ ರೀತಿಯ ಮುಂಜಾಗೃತಾ ಕ್ರಮ ವಹಿಸಬೇಕಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ ಹೇಳಿದರು
ಜಿಲ್ಲಾಧಿಕಾರಿ ಕಛೇರಿ ನ್ಯಾಯಾಲಯ ಸಭಾಂಗಣದಲ್ಲಿ ಗುರುವಾರ ನಡೆದ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ಝೀಕಾ ವೈರಸ್ ರೋಗ ಹಾಗೂ ಇತರೆ ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ಕುರಿತು ಸಭೆ ನಡೆಸಿ ಮಾತನಾಡಿ, ಎಲ್ಲಾ ಇಲಾಖೆಗಳು ಸಮನ್ವಯ ಸಾಧಿಸಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬೇಕು, ಇದಕ್ಕಾಗಿ ಕ್ರಿಯಾಯೋಜನೆ ತಯಾರು ಮಾಡಿ ಯಾವುದೇ ರೀತಿಯಲ್ಲಿ ಯಾವುದೇ ರೋಗಗಳು ಉಲ್ಬಣಗೊಳ್ಳದಂತೆ ನೋಡಿಕೊಳ್ಳುವ ಕಾರ್ಯವಾಗಬೇಕೆಂದು ಸೂಚಿಸಿದರು.
ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ರಮೇಶ ರಾವ್ ಅವರು ಮಾತನಾಡಿ ಇದುವರೆವಿಗೂ ಜಿಲ್ಲೆಯಲ್ಲಿ ಯಾವುದೇ ಝೀಕಾ ವೈರಸ್ ಸೋಂಕು ಕಂಡು ಬಂದಿರುವುದಿಲ್ಲ. ಜೀಕಾ ವೈರಸ್ ಕಾಯಿಲೆ ಒಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು ಡೆಂಗ್ಯೂ ಹಾಗೂ ಚಿಕನ್‌ಗುನ್ಯಾ ರೋಗಗಳನ್ನುಂಟು ಮಾಡುವ ಪ್ಲೇವಿ ವೈರಸ್ ರೋಗಾಣುವಿನ ಈಡೀಸ್ ಈಜಿಪ್ಟ್ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಈ ಸೊಳ್ಳೆಯು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತದೆ. ಇದರಿಂದ ಇದ್ದಕ್ಕಿದ್ದಂತೆ ತೀವ್ರಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗ ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣ ಸಿಕೊಳ್ಳುವುದು ಈ ರೋಗದ ಪ್ರಮುಖ ಲಕ್ಷಣಗಳಾಗಿರುತ್ತವೆ ಎಂದರು.
ಈಡೀಸ್ ಈಜಿಪ್ಟ್ ಸೊಳ್ಳೆಯು ಸ್ವಚ್ಚವಾದ ನೀರಿನಲ್ಲಿ ಸಂತಾನವೃದ್ದಿ ಮಾಡುವುದರಿಂದ ಮನೆಯ ಒಳಾಂಗಣ ಮತ್ತು ಹೊರಾಂಗಣದಲ್ಲಿ ತೊಟ್ಟಿ, ಡ್ರಂ / ಬ್ಯಾರಲ್, ಏ???ಕೂಲರ್, ಪ್ರಿಡ್ಜ್, ಹೂಕುಂಡಗಳು ಘನ ತ್ಯಾಜ್ಯ ವಸ್ತುಗಳಾದ ಹೊರಳು ಕಲ್ಲು, ಟೈರುಗಳು, ತೆಂಗಿನ ಚಿಪ್ಪುಗಳು, ಮುಂತಾದವುಗಳಲ್ಲಿ ನಾಲ್ಕು ಹಂತಗಳಲ್ಲಿ ಮೊಟ್ಟೆ, ಲಾರ್ವ, ಪ್ಯೂಪ, ಹಾಗೂ ವಯಸ್ಕ ಸೊಳ್ಳೆಯಾಗಿ ಬೆಳವಣ ಗೆಯಾಗುತ್ತವೆ. ಆದ್ದರಿಂದ ಪ್ರತಿ ನಿತ್ಯ ಬಳಸುವಂತಹ ಗೃಹಪಯೋಗ ವಸ್ತುಗಳಾದ ತೊಟ್ಟಿ, ಡ್ರಂ / ಬ್ಯಾರಲ್, ಏರ್ ಕೂಲರ್, ಪ್ರಿಡ್ಜ್ ಮುಂತಾದವುಗಳನ್ನು ವಾರಕ್ಕೊಮ್ಮೆ ಶುಚಿ ಗೊಳಿಸುವುದು ಹಾಗೂ ವಾರಕ್ಕೊಮ್ಮೆ ಒಣಗಿಸಿ ಒಣದಿನ ( ಡ್ರೈಡೇ) ಮಾಡುವುದು ಉತ್ತಮ. ಮತ್ತು ಘನ ತ್ಯಾಜ್ಯ ವಸ್ತುಗಳಾದ ಟೈರುಗಳು, ತೆಂಗಿನ ಚಿಪ್ಪುಗಳು, ಪ್ಲಾಸ್ಟಿಕ್ ಲೋಟಗಳನ್ನು ಸೂಕ್ತವಾಗಿ ವಿಲೇವಾರಿ ಮಾಡುವುದು ಹಾಗೂ ಜೈವಿಕ ವಿಧಾನವಾದ ಗಪ್ಪಿ ಮತ್ತು ಗಾಂಬೂಸಿಯ ಲಾರ್ವಾ ಹಾರಿ ಮೀನುಗಳನ್ನು ತೊಟ್ಟಿ, ಡ್ರಂಗಳಲ್ಲಿ ಬಿಡುವುದು. ಹಾಗೂ ಸ್ವಯಂರಕ್ಷಣಾ ವಿಧಾನಗಳಾದ ಮೈ ತುಂಬ ಬಟ್ಟೆಧರಿಸುವುದು ಮಲಗುವ ವೇಳೆಯಲ್ಲಿ ಸೊಳ್ಳೆಯ ಪರದೆಯನ್ನು ಬಳಸುವುದು ಸಂಜೆಯ ವೇಳೆ ಬೇವಿನ ಸೊಪ್ಪಿನ ಹೊಗೆ ಹಾಕಿಕೊಳ್ಳುವುದು ಕಿಟಕಿ ಬಾಗಿಲುಗಳಿಗೆ ಮೆಸ್ ಅಳವಡಿಸಿಕೊಳ್ಳುವುದು ಮತ್ತು ರಾಸಾಯನಿಕ ವಿಧಾನಗಳಾದ ಗುಡ್ನೈಟ್ ಕಾಯಿಲ್, ಊದುಬತ್ತಿ, ಮುಂತಾದವುಗಳನ್ನು ಬಳಸುವುದರಿಂದ ಸೊಳ್ಳೆಗಳಿಂದ ಹರಡುವಂತಹ ಖಾಯಿಲೆಗಳನ್ನು ತಡೆಗಟ್ಟಬಹುದು ಎಂದರು.
ಸೊಳ್ಳೆಯಿಂದ ಕಚ್ಚಿಸಿಕೊಂಡ ವ್ಯಕ್ತಿ ತಪಾಸಣೆ ನಡೆಸದೇ ರಕ್ತ ದಾನ ಮಾಡಿದ್ದಲ್ಲಿ ಸೋಂಕು ಇರುವ ವ್ಯಕ್ತಿ ನೀಡುವ ರಕ್ತದಿಂದ ಖಾಯಿಲೆ ಹರಡುತ್ತದೆ ಹಾಗೂ ನಿರ್ಮಾಣ ಹಂತದಲ್ಲಿ ಇರುವ ಕಟ್ಟಡಗಳಲ್ಲಿ ನೀರು ನಿಲ್ಲಿವ ಸಾಧ್ಯತೆ ಹೆಚ್ಚಿರುವುದರಿಂದ ಇದರಬಗ್ಗೆ ಗಮನ ಹರಿಸಬೇಕು ಎಂದರು.
ಗರ್ಭಿಣ ಯರಲ್ಲಿ ಒಂದು ವೇಳೆ ಝೀಕಾ ವೈರಸ್ ಸೋಂಕು ಕಂಡು ಬಂದಲ್ಲಿ ಗರ್ಭಪಾತವಾಗಬಹುದು ಮತ್ತು ಮಗುವಿನ ಮೆದುಳಿಗೆ ತೊಂದರೆಯಾಗಬಹುದು ಹಾಗೂ ಮೈಕ್ರೋಸೆಫಾಲಿ ಇರುವ ಮಗು ಜನನವಾಗುವ ಸಂಭವ ಹೆಚ್ಚಾಗಿರುತ್ತದೆ. ಆದ್ದರಿಂದ ಈ ಲಕ್ಷಣಗಳು ಕಂಡುಬಂzವರು ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಮತ್ತು ಸಲಹೆಗಳನ್ನು ಪಡೆಯುವುದು ಉತ್ತಮವಾಗಿರುತ್ತದೆ. ಈ ರೋಗಕ್ಕೆ ಯಾವುದೇ ನಿಖರವಾದ ಚಿಕಿತ್ಸೆ ಇರದಿರುವ ಕಾರಣ ಪ್ರಾರಂಭಿಕ ಹಂತದಲ್ಲೇ ಚಿಕಿತ್ಸೆಯನ್ನು ಪಡೆದರೆ ಮರಣ ಪ್ರಮಾಣವನ್ನು ತಪ್ಪಿಸಬಹುದು ಎಂದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತೆ ವಿದ್ಯಾಶ್ರೀ ಚಂದರಗಿ, ಕಾರವಾರ ವೈಧ್ಯಕೀಯ ಮಾಹಾವಿಧ್ಯಾಲಯದ ಆರ್ ಎಮ್ ಒ ಡಾ. ವೆಂಕಟೇಶ, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ. ಲಲಿತಾ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್. ಪುರುಷೋತ್ತಮ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಪಿ. ನಾಗರಾಜ್, ತಹಶೀಲ್ದಾರ್ ನಿಶ್ಚಲ ನರೋನಾ, ತಾಲೂಕು ವೈದ್ಯಾಧಿಕಾರಿ ಡಾ. ಸೂರಜ್ ನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕೊರೋನಾ 3ನೇ ಅಲೆ ತಡೆಯಲು ಖಾಸಗಿ ಆಸ್ಪತ್ರೆಗಳ ಕಾರ್ಯತಂತ್ರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ