ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಹಾಡ ಹಗಲು ಜನನಿಬಿಡ ಪ್ರದೇಶದಿಂದ ಅಪಹರಣಗೊಂಡಿದ್ದ ಬಾಲಕನನ್ನು ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಆರೋಪಿ ಬಸ್ ಚಾಲಕ ಎಂದು ಗೊತ್ತಾಗಿದ್ದು, ಆತ ಕರ್ತವ್ಯದ ಮೇಲೆ ಹೈದರಾಬಾದ್ ಗೆ ತೆರಳಿದ್ದು ಮರಳಿ ಬುರುವುದನ್ನು ಪೊಲೀಸರು ಕಾಯುತ್ತಿದ್ದಾರೆ.
ಇಲ್ಲಿಯ ಮಾರ್ಕೆಟ್ ಪೊಲೀಸ್ ಠಾಣೆ ಎಂದುರು ನಿಂತಿದ್ದ ಬಾಲಕನನ್ನು ವ್ಯಕ್ತಿಯೋರ್ವ ಸೋಮವಾರ ಬೈಕ್ ಮೇಲೆ ಅಪಹರಿಸಿದ್ದ. ಸಿಸಿ ಟಿವಿ ಪುಟೇಜ್ ಗಮನಿಸಿದ ಪೊಲೀಸರು ಆನಗೋಳದ ಮನೆಯಲ್ಲಿ ಬಾಲಕನನ್ನು ಪತ್ತೆ ಮಾಡಿದರು.
ಮನೆಯಲ್ಲಿ ಮಹಿಳೆ ಜೊತೆ ಬಾಲಕ ಇದ್ದ. ಮಹಿಳೆಯನ್ನು ವಿಚಾರಿಸಿದಾಗ ಆಕೆಯ ಪತಿ ಬಾಲಕನನ್ನು ತಂದಿರುವುದಾಗಿ ಹೇಳಿದ್ದು, ಆತ ಬಸ್ ಚಾನಕನಾಗಿದ್ದರಿಂದ ಹೈದರಾಬಾದ್ ಗೆ ಕರ್ತವ್ಯದ ಮೇಲೆ ತೆರಳಿದ್ದಾನೆಂದು ತಿಳಿಸಿದ್ದಾಳೆ.
ಎರಡು ಮದುವೆಯಾದರೂ ಆತನಿಗೆ ಮಕ್ಕಳಿರಲಿಲ್ಲ. ಸೋಮವಾರ ಆತ ಬೈಕ್ ಮೇಲೆ ಹೋಗುವಾಗ ಬಾಲಕ ಅಡ್ಡ ಬಂದಿದ್ದಾನೆ. ಮಕ್ಕಳನ್ನು ಯಾರೋ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ ಎಂದುಕೊಂಡ ಆತ ಬಾಲಕನನ್ನು ಬೈಕ್ ಮೇಲೆ ಕೂಡ್ರಿಸಿಕೊಂಡು ಮನೆಗೆ ಕರೆದುಕೊಂಡು ಹೋಗಿದ್ದಾನೆ. ಬುಧವಾರ ಆತ ವಾಪಸ್ ಬಂದ ನಂತರ ಹೆಚ್ಚಿನ ಮಾಹಿತಿ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಳ್ಳಾಗಡ್ಡಿ ಖಾನಾಪುರದ ನಾಗಪ್ಪ ನಾಯಿಕ (5) ಎನ್ನುವ ಬಾಲಕ ಪಾಲಕರೊಂದಿಗೆ ನಗರಕ್ಕೆ ಬಂದಿದ್ದ. ತರಕಾರಿ ಮಾರಾಟ ಮಾಡುವ ಪಾಲಕರು ಆತನನ್ನು ನಿಲ್ಲಿಸಿ ಅಂಗಡಿಗೆ ಹೋಗಿ ಬರುವುದರೊಳಗೆ ಬಾಲಕ ನಾಪತ್ತೆಯಾಗಿದ್ದ. ತಕ್ಷಣ ಪಾಲಕರು ಪೊಲೀಸ್ ದೂರು ನೀಡಿದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕ್ಯಾಮರಾದಲ್ಲಿ ಪರಿಶೀಲಿಸಿ, ಆಲಗೋಳದಲ್ಲಿ ಆರೋಪಿಯನ್ನು ಪತ್ತೆ ಮಾಡಿದರು.
ಎಸಿಪಿ ನಾರಾಯಣ ಬರಮನಿ ನೇತೃತ್ವದ ತಂಡ ಕೇವಲ 8 ಗಂಟೆಯಲ್ಲಿ ಬಾಲಕನನ್ನು ಪತ್ತೆ ಮಾಡಿ ಪ್ರಶಂಸೆಗೆ ಪಾತ್ರವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ